ಧಾರವಾಡ, ಜ.10 (DaijiworldNews/PY): "ಬಿಜೆಪಿಗೆ ಪೂರ್ಣ ಬಹುಮತ ಬರುತ್ತಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬಿಎಸ್.ಯಡಿಯೂರಪ್ಪ ಅವರು ದೆಹಲಿಗೆ ಏಕೆ ಹೋಗಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ, ದೆಹಲಿಯಿಂದ ವಾಪಾಸ್ಸಾಗುವ ಸಂದರ್ಭ ಒಳ್ಳೆಯ ಸುದ್ದಿ ಬರುತ್ತದೆ. ದೆಹಲಿಯ ನಾಯಕರು ಒಳ್ಳೆಯ ನಿರ್ಧಾರ ಮಾಡಿ ಕಳಿಸುತ್ತಾರೆ. ರಾಜ್ಯಕ್ಕೆ ಏನು ಒಳ್ಳೆಯದಾಗಬೇಕೋ ಅದನ್ನೆ ತೀರ್ಮಾನ ಮಾಡುತ್ತಾರೆ" ಎಂದು ಹೇಳಿದರು.
"ಎಲ್ಲಾ ಶಾಸಕರಿಗೂ ಕೂಡಾ ಮಂತ್ರಿ ಆಗುವ ಇಚ್ಛೆ ಇದ್ದೇ ಇರುತ್ತದೆ. ಆದರೆ, ಅದಕ್ಕೊಂದು ಮಿತಿ ಅನ್ನುವುದು ಇದೆ. ಬಿಜೆಪಿಗೆ ಪೂರ್ಣ ಬಹುಮತ ದೊರೆತಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಪಕ್ಷಕ್ಕೆ ಕಾಂಗ್ರೆಸ್, ಜೆಡಿಎಸ್ನಿಂದ ಅನೇಕ ಮಂದಿ ಬಂದಿದ್ದಾರೆ. ಯಾರೆಲ್ಲಾ ಪಕ್ಷಕ್ಕೆ ಬಂದಿದ್ದಾರೋ ಅವರೆಲ್ಲಾ ಕಾರ್ಯಕರ್ತರಾಗಿದ್ದಾರೆ. ಅವರು ಹೊರಗಿನಿಂದ ಬಂದವರು ಎಂದು ನಮಗೆ ಯಾವತ್ತೂ ಅನಿಸಿಲ್ಲ" ಎಂದು ತಿಳಿಸಿದರು.
ಸಂಕ್ರಾತಿ ನಂತರ ಬದಲಾವಣೆ ಎಂಬ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಅವರ ಹೇಳಿಕೆ ಬೇರೆ ವಿಚಾರದ ಬಗ್ಗೆ ಎಂದು ನನ್ನೊಂದಿಗೆ ಹೇಳಿದ್ದಾರೆ. ಇವರ ಹೇಳಿಕೆ ವಿಚಾರವಾಗಿ ಈಗಾಗಲೇ ರಾಜ್ಯಾಧ್ಯಕ್ಷರು ಮಾತನಾಡಿದ್ದು, ಶಿಸ್ತು ಕ್ರಮಕ್ಕೆ ಕೇಂದ್ರ ಸರ್ಕಾರಕ್ಕೂ ಕಳುಹಿಸಿದ್ದಾರೆ. ಕೇಂದ್ರದ ಶಿಸ್ತು ಸಮಿತಿ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ" ಎಂದರು.