ಮುಂಬೈ, ಜ.10 (DaijiworldNews/PY): ಅನುಮತಿ ಇಲ್ಲದೇ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ ಎನ್ನುವ ಹಿನ್ನೆಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ನೀಡಿದ್ದ ನೋಟಿಸ್ ಪ್ರಶ್ನಿಸಿ ಬಾಲಿವುಡ್ ನಟ ಸೋನು ಸೂದ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸೋನು ಸೂದ್ ಅವರು ಕಳೆದ ವಾರ ಡಿ.ಪಿ.ಸಿಂಗ್ ಅವರ ಮೂಲಕ ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ಆರು ಅಂತಸ್ತಿನ ಶಕ್ತಿ ಸಾಗರ್ ಕಟ್ಟಡದಲ್ಲಿ ನಾನು ಯಾವುದೇ ರೀತಿಯಾದ ಅಕ್ರಮ ಅಥವಾ ಅನಧಿಕೃತ ನಿರ್ಮಾಣ ನಡೆಸಿಲ್ಲ ಎಂದು ತಿಳಿಸಿದ್ದಾರೆ.
ಸೋಮವಾರ ಈ ಸಂಬಂದ ಅರ್ಜಿ ವಿಚಾರಣೆ ನಡೆಯಲಿದ್ದು, ಅರ್ಜಿ ವಿಚಾರಣೆಯನ್ನು ನ್ಯಾ. ಪೃಥ್ವಿರಾಜ್ ಚವಾಣ್ ನಡೆಸಲಿದ್ದಾರೆ.
"ಅರ್ಜಿದಾರರಾದ ಸೋನು ಸೂದ್ ಅವರು ಶಕ್ತಿ ಸಾಗರ್ ಕಟ್ಟಡದಲ್ಲಿ ಯಾವುದೇ ರೀತಿಯಾದ ಅಕ್ರಮ ಬದಲಾವಣೆಗಳನ್ನು ಮಾಡಿಲ್ಲ. ಎಂಆರ್ಟಿಪಿ ಕಾಯ್ದೆಯಡಿ ಅವಕಾಶವಿರುವಂತ ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ" ಎಂದು ಡಿ.ಪಿ ಸಿಂಗ್ ಹೇಳಿದ್ದಾರೆ.
ಅನುಮತಿ ಇಲ್ಲದೇ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ ಎನ್ನುವ ಹಿನ್ನೆಲೆ ಸೋನು ಸೂದ್ ಅವರ ವಿರುದ್ದ ಬಿಎಂಸಿ ಪ್ರಕರಣ ದಾಖಲಿಸಿಕೊಂಡಿತ್ತು.