ಬೆಂಗಳೂರು,ಜ.10 (DaijiworldNews/HR): ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶವಿದ್ದರೆ ಕರ್ನಾಟಕದಲ್ಲಿ ನಾನೇ ಮೊದಲು ಕೊರೊನಾ ಲಸಿಕೆಯನ್ನು ಪಡೆಯುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನವರಿ 11 ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಲಿದ್ದು, ಅದರಲ್ಲಿ ಯಾರಿಗೆ ಹೇಗೆ ಯಾವಾಗ ಲಸಿಕೆ ನೀಡಬೇಕು ಎಂಬ ಅಂಶವನ್ನು ತಿಳಿಸಲಾಗಿರುತ್ತದೆ. ಜನಪ್ರತಿನಿಧಿಗಳು ಪಡೆಯಬಹುದು ಎಂಬ ಅವಕಾಶವಿದ್ದರೆ ನಾನೇ ಮೊದಲ ಲಸಿಕೆ ಪಡೆದು ಆರೋಗ್ಯ ಕಾರ್ಯಕರ್ತರ, ಜನಸಾಮಾನ್ಯರ ಆತ್ಮವಿಶ್ವಾಸ ಹೆಚ್ಚಿಸುತ್ತೇನೆ" ಎಂದರು.
ಇನ್ನು ಮೊದಲ ಹಂತದಲ್ಲಿ ಕರ್ನಾಟಕಕ್ಕೆ ಸಿಗಲಿರುವ ಕೊರೊನಾ ಲಸಿಕೆಯನ್ನು ಸಂಗ್ರಹಿಸಲು ನಗರದ ಆನಂದ್ ರಾವ್ ವೃತ್ತದ ಆರೋಗ್ಯ ಇಲಾಖೆ ಹಳೇ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ವಿತರಣೆಯಾಗುವ 11 ಲಕ್ಷ ಡೋಸ್ ಲಸಿಕೆಯ ಸಂಗ್ರಹಿಸಲಾಗುತ್ತದೆ ಎಂದು ತಿಳಿದು ಬಂದಿದೆ.