ಹುಬ್ಬಳ್ಳಿ, ಜ.10 (DaijiworldNews/PY): "ಕೇಂದ್ರ ಬಜೆಟ್ ಅಧಿವೇಶನವು ಜ.29ರಿಂದ ಫೆ.15ರ ತನಕ ನಡೆಯಲಿದೆ. ಜ.30ರಂದು ವರ್ಚುವಲ್ ಮುಖೇನ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎರಡನೇ ಅವಧಿಯ ಬಜೆಟ್ ಅಧಿವೇಶನವು ಮಾರ್ಚ್ 8ರಿಂದ ಎಪ್ರಿಲ್ 8ರ ತನಕ ನಡೆಯಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ" ಎಂದರು.
"ರಾಜ್ಯಕ್ಕೆ ಅವಶ್ಯಕವಾಗಿ ಬೇಕಾದಂತಹ ಸೌಲಭ್ಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದ್ದು, ಎಲ್ಲಾ ವಿಚಾರಗಳ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಲಿದ್ದೇವೆ. ಈ ವೇಳೆ ಪ್ರಶ್ನೋತ್ತರ ಅವಧಿಯೂ ಕೂಡಾ ಇರಲಿದೆ" ಎಂದು ತಿಳಿಸಿದರು.
ಮೊದಲು ಪ್ರಧಾನಿ ಅವರು ಕೊರೊನಾ ಲಸಿಕೆ ಪಡೆದುಕೊಳ್ಳಲಿ ಎಂದ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ದೇಶವನ್ನು ವಿರೋಧಿಸುತ್ತಿದೆ. ವಿಜ್ಞಾನಿಗಳು ಶ್ರಮಪಟ್ಟು ಲಸಿಕೆ ಕಂಡು ಹಿಡಿದಿದ್ದಾರೆ. ಕಾಂಗ್ರೆಸ್ ವಿಜ್ಞಾನಿಗಳಿಗೆ ಅವಮಾನ ಮಾಡುತ್ತಿದೆ" ಎಂದು ಹೇಳಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿಎಂ ಬಿಎಸ್.ಯಡಿಯೂರಪ್ಪ ಅವರು ಅದೇ ವಿಚಾರವಾಗಿ ದೆಹಲಿಗೆ ಹೋಗಿದ್ದು, ಸಂಪುಟ ವಿಸ್ತರಣೆಯ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ" ಎಂದು ತಿಳಿಸಿದರು.