ಶ್ರೀನಗರ, ಜ.10 (DaijiworldNews/PY): ಹಿಮಪಾತದ ಹಿನ್ನೆಲೆ ಏಳು ದಿನಗಳಿಂದ ಮುಚ್ಚಿದ್ದ ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ರವಿವಾರ ತೆರೆಯಲಾಯಿತು.
ಸಾಂದರ್ಭಿಕ ಚಿತ್ರ
"ರವಿವಾರ ಮುಂಜಾನ ಕಾಶ್ಮೀರದ 260 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ತೆರೆಯಲಾಗಿದ್ದು, ಏಕಮುಖ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಭಾರೀ ಹಿಮಪಾತ ಹಾಗೂ ಭೂಕುಸಿತದ ಹಿನ್ನೆಲೆ ಜ.3ರಿಂದ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಅನೇಕ ವಾಹನಗಳು ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದವು. ಶುಕ್ರವಾರದಂದು ಹಿಮವನ್ನು ತೆರವುಗೊಳಿಸಲಾಗಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು" ಎಂದಿದ್ದಾರೆ.
"ಭಾರೀ ಹಿಮಪಾತದ ಹಿನ್ನೆಲೆ ಮೊಘಲ್ ಹಾಗೂ ಶೋಪಿಯಾನ್-ರಜೌರಿ ಆಕ್ಸಿಸ್ ರಸ್ತೆ ಕೂಡ ಮುಚ್ಚಿತ್ತು. ಶ್ರೀನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ರವಿವಾರ ಸಹ ಹಿಮಪಾತವಾಗಿದ್ದು, ವಿಮಾನ ಸಂಚಾರಕ್ಕೆ ಪರಿಣಾಮ ಬೀರಿತ್ತು" ಎಂದು ತಿಳಿಸಿದ್ದಾರೆ.