ರಾಜಸ್ಥಾನ, ಜ.10 (DaijiworldNews/PY): ರಾಜಸ್ಥಾನದ ಬಿಜೆಪಿ ಶಾಸಕ ಮದನ್ ದಿಲಾವರ್ ಅವರು ವಿವಾದಿತ ಹೇಳಿಕೆಯೊಂದನ್ನು ನೀಡಿದ್ದು, "ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೋಳಿ ಮಾಂಸದ ಬಿರಿಯಾನಿ ತಿನ್ನುವ ಮೂಲಕ ಹಕ್ಕಿಜ್ವರ ಹರಡುವ ಪಿತೂರಿ ಮಾಡಿದ್ದಾರೆ" ಎಂದಿದ್ದಾರೆ.
"ದೇಶವನ್ನು ನಾಶ ಮಾಡಲು ಬಯಸುತ್ತಿರುವ ಉಗ್ರರು ಹಾಗೂ ದರೋಡೆಕೋರರು ದೆಹಲಿ ಗಡಿಯಲ್ಲಿ ಕೇಂದ್ರದ ನೂತನ ಕರಷಿ ಕಾನೂನುಗಳ ವಿರುದ್ದ ನಡೆಯುತ್ತಿರುವ ರೈತರ ಹೋರಾಟಕ್ಕೆ ಸೇರಿಕೊಂಡಿರಬಹುದು" ಎಂದು ಹೇಳಿದ್ದಾರೆ.
"ರೈತರು ಎಂದು ಕರೆಯಲ್ಪಡುವವರು ದೇಶದ ಬಗ್ಗೆ ಚಿಂತಿಸುತ್ತಿಲ್ಲ. ಬದಲಾಗಿ ಪಿಕ್ನಿಕ್ ಹಾಗೂ ಐಷಾರಾಮಿ ಸೌಕರ್ಯಗಳನ್ನುಅನುಭವಿಸುತ್ತಾರೆ" ಎಂದಿದ್ದಾರೆ.
ಈ ಬಗ್ಗೆ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, "ಪ್ರತಿಭಟನಾ ಸ್ಥಳಗಳಲ್ಲಿ ಕೋಳಿಮಾಂಸವನ್ನು ಸೇವಿಸುವ ಮೂಲಕ ಹಕ್ಕಿಜ್ವರವನ್ನು ಹರಡಲು ಹೋರಾಟಗಾರರು ಸಂಚು ನಡೆಸಿದ್ದಾರೆ" ಎಂದು ಹೇಳಿದ್ದಾರೆ.
ಮದನ್ ದಿಲಾವರ್ ಅವರು ನೀಡಿದ ಹೇಳಿಕೆಗೆ ಆಡಳಿತರೂಢ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, "ಇದು ನಾಚಿಕೆಗೇಡಿನ ಸಂಗತಿಯಾಗಿದ್ದು, ಬಿಜೆಪಿ ಸಿದ್ದಾಂತವನ್ನು ಪ್ರತಿಬಿಂಬಿಸುತ್ತದೆ" ಎಂದಿದೆ.