ಕೋಲ್ಕತ್ತ, ಜ.10 (DaijiworldNews/PY): "ಪಶ್ಚಿಮ ಬಂಗಾಳದಲ್ಲಿ ನೆಲೆಕಳೆದುಕೊಳ್ಳುವ ಭೀತಿಯಿಂದಾಗಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಪಿಎಂ-ಕಿಸಾನ್ ಯೋಜನೆ ಜಾರಿಗೆ ಮುಂದಾಗಿದ್ದಾರೆ" ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಪೂರ್ವ ಬರ್ಧಮಾನ್ ಜಿಲ್ಲೆಯ ಕಟ್ವಾದಲ್ಲಿ ಮಾತನಾಡಿದ ಅವರು, "ಮಮತಾ ಅವರು ಪಿಎಂ-ಕಿಸಾನ್ ಪ್ರಾರಂಭ ಮಾಡುವ ವಿಚಾರವಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಯಿತು. ಆದರೆ, ಇದು ಟಿಎಂಸಿಗೆ ತಡವಾಯಿತು. ಪಶ್ಚಿಮ ಬಂಗಾಳದ ಸುಮಾರು 4.67 ಲಕ್ಷ ಜನರಿಗೆ ಸಿಗಬೇಕಿದ್ದ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಟಿಎಂಸಿ ಸರ್ಕಾರ ಕಸಿದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿಯು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಿದೆ" ಎಂದು ತಿಳಿಸಿದ್ದಾರೆ.
"ಬಿಜೆಪಿಯು ರಾಜ್ಯದಲ್ಲಿ ಕೃಷಿಕ್ ಸುರಕ್ಷಾ ಅಭಿಯಾನ ಹಾಗೂ ಒಂದು ಮುಷ್ಟಿ ಅಕ್ಕಿ ಸಂಗ್ರಹ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ರೈತರ ಪರವಾಗಿ ಕಾರ್ಯಕ್ರಮಗಳನ್ನು ಆರಂಭ ಮಾಡಿದ ನಂತರ ಟಿಎಂಸಿ ಮುಖ್ಯಸ್ಥರಿಗೆ ರೈತರ ಬಗ್ಗೆ ಕಾಳಜಿ ಮೂಡಿದೆ" ಎಂದಿದ್ದಾರೆ.
ತಮ್ಮ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬೆಂಗಾವಲು ಪಡೆಯ ಮೇಲೆ ದಾಳಿ ಮಾಡುವುದು ಬಂಗಾಳದ ಸಂಸ್ಕೃತಿಯೇ?. ಬಂಗಾಳಕ್ಕೆ ಹೊರಗಿನಿಂದ ಬರುವವರ ವಿಚಾರವಾಗಿ ಟಿಎಂಸಿಯಲ್ಲಿ ಚರ್ಚೆ ನಡೆದಿದೆ. ಆದರೆ, ರಾಜ್ಯದ ಸಂಸ್ಕೃತಿ ಹಾಗೂ ಸಂಪ್ರದಾಯದ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಪಕ್ಷ ಹಾಗೂ ಅದರ ಮುಖ್ಯಸ್ಥರ ವಿಚಾರದ ಬಗ್ಗೆ ಏನು ಹೇಳಬೇಕು?" ಎಂದು ಕೇಳಿದ್ದಾರೆ.
ಡಿ.10ರಂದು ಜೆ.ಪಿ.ನಡ್ಡಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭ ಅವರ ಬೆಂಗಾವಲು ಪಡೆಯ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದರು.