ನವದೆಹಲಿ, ಜ. 09 (DaijiworldNews/SM): ರಾಜ್ಯದಲ್ಲಿ ಬಹುನಿರೀಕ್ಷಿತ ಕೊರೋನಾ ವೈರಸ್ ವ್ಯಾಕ್ಸಿನೇಷನ್ ಜನವರಿ 16 ರಂದು ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಘೋಷಿಸಿದೆ.
ಮುಂದಿನ ದಿನಗಳಲ್ಲಿ ಸರಣಿ ಹಬ್ಬಗಳು ಬರಲಿವೆ. "ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್, ಮಾಘ್ ಬಿಹು ಸೇರಿದಂತೆ ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್ -19 ಲಸಿಕೆ 2021 ಜನವರಿ 16ರಿಂದ ಪ್ರಾರಂಭಿಸಲು ಸರಕಾರ ನಿರ್ಧರಿಸಿದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಜನವರಿ 3ರಂದು, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನಿರ್ಬಂಧಿತ ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ.
ಇದಕ್ಕೂ ಮುನ್ನ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ದೇಶದಲ್ಲಿ ಕೋವಿಡ್ -19 ರ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ವಿವಿಧ ಸಮಸ್ಯೆಗಳನ್ನು ಒಳಗೊಂಡ ಕೋವಿಡ್ ನಿರ್ವಹಣೆಯ ಸ್ಥಿತಿಯ ಬಗ್ಗೆ ಪ್ರಧಾನಿ ವಿವರವಾದ ಮತ್ತು ಸಮಗ್ರ ಪರಿಶೀಲನೆ ನಡೆಸಿದರು. ಲಸಿಕೆ ಹೊರತರಲು ರಾಜ್ಯ ಸರ್ಕಾರಗಳ ನಿಕಟ ಸಹಯೋಗದೊಂದಿಗೆ ಕೇಂದ್ರದ ಸನ್ನದ್ಧತೆಯ ಸ್ಥಿತಿಯ ಬಗ್ಗೆ ಮೋದಿ ಅವರಿಗೆ ತಿಳಿಸಲಾಯಿತು.