ಮಂಗಳೂರು, ಜ. 09 (DaijiworldNews/SM): ಉಜಿರೆಯಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದಿದ್ದಾರೆ.
ಯಾವ ಎಸ್ಡಿಪಿಐ ನಮ್ಮ ಹಲವಾರು ಕಾರ್ಯಕರ್ತರ ಹತ್ಯೆಗೆ ಕಾರಣಿಕರ್ತರಾದರೋ ಅವರು ಚುನಾವಣೆಗೆ ಸ್ಪರ್ಧಿಸಿ ಒಂದೆರಡು ಸ್ಥಾನ ಗೆದ್ದಾಗ ಪಾಕ್ ಪರ ಘೋಷಣೆ ಕೂಗುವುದು ಅವರ ನಿಲುವನ್ನು ತೋರಿಸುತ್ತದೆ. ಅವರು ಯಾರ ಪರ ಇದ್ದಾರೆಂಬುದನ್ನು ತೋರಿಸುತ್ತದೆ. ಇಲ್ಲಿನ ಸರಕಾರಿ ಸೌಲಭ್ಯಗಳನ್ನು ಪಡೆದು ನಮ್ಮ ವಿರೋಧಿ ಪಾಕ್ ಪರ ಮಾತನಾಡುವುದಾದರೆ ಅವರನ್ನು ದೇಶದ್ರೋಹಿ ಎಂದು ಘೋಷಣೆ ಮಾಡುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಅಗತ್ಯವಾದ ಕಾನೂನು ಬದಲಾವಣೆಯನ್ನು ಸರಕಾರ ಮಾಡಬೇಕಾಗಿದೆ. ಆ ಒತ್ತಡವನ್ನು ನಾವು ಮಾಡಲಿದ್ದೇವೆ. ನಮ್ಮ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿರಲು ಸಾಧ್ಯವಿಲ್ಲ. ಇದು ಮೋಸದ ಆಟ. ಇದು ಅನಗತ್ಯ ಆರೋಪ. ಅವರ ಹುಳುಕನ್ನು ಅವರ ದೇಶ ವಿರೋಧಿ ಚಟುವಟಿಕೆಯನ್ನು ಮುಚ್ಚಿಡಲು ಆರೋಪ ಮಾಡುತ್ತಿದ್ದಾರೆ. ಯಾರು ಭಾರತ ವಿರೋಧಿ ಘೋಷಣೆ ಕೂಗುತ್ತಾರೋ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಹೇಳಿದರು.