ಕಾಸರಗೋಡು, ಜ. 09 (DaijiworldNews/SM): ಪತ್ನಿಯನ್ನು ಗುಂಡಿಕ್ಕಿ ಕೊಂದು ಪತಿ ಆತ್ಮಹತ್ಯೆಗೈದ ದಾರುಣ ಘಟನೆ ಮುಳಿಯಾರು ಸಮೀಪದ ವಡಕ್ಕಕರೆ ಎಂಬಲ್ಲಿ ಇಂದು ( ಶನಿವಾರ) ಮಧ್ಯಾಹ್ನ ನಡೆದಿದೆ.
ಪತ್ನಿ ಬೇಬಿ( 35) ಯನ್ನು ನಾಡಕೋವಿಯಿಂದ ಗುಂಡಿಕ್ಕಿ ಕೊಂದ ಬಳಿಕ ಪತಿ ವಿಜಯನ್( 40) ಮನೆ ಸಮೀಪದ ಕಾಡಿನಲ್ಲಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ . ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಯಿಂದ ತಿಳಿದುಬಂದಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೇಬಿ:
ಮನೆಯ ಒಳಗಡೆ ಕೋವಿಯಿಂದ ತಲೆಗೆ ಗುಂಡಿಕ್ಕಿದ್ದು, ಬೇಬಿಯ ತಲೆ ಛಿದ್ರಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೃತ್ಯದ ಬಳಿಕ ಮನೆಯಿಂದ 200 ಮೀಟರ್ ದೂರದ ರಬ್ಬರ್ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿಜಯನ್ ಪತ್ತೆಯಾಗಿದ್ದಾನೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಗುಂಡಿನ ಶಬ್ದ ಕೇಳಿ ಪರಿಸರವಾಸಿಗಳು ಧಾವಿಸಿ ಬಂದಾಗ ಬೇಬಿ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ವಿಜಯನ್ ನಾಪತ್ತೆಯಾಗಿದ್ದನು. ಇದರಿಂದ ಹುಡುಕಾಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಕೆಲವು ಸಮಯಗಳಿಂದ ದಾಂಪತ್ಯ ವಿರಸ:
ಇವರಿಬ್ಬರ ನಡುವೆ ಕೆಲ ಸಮಯಗಳಿಂದ ದಾಂಪತ್ಯ ವಿರಸ ಉಂಟಾಗಿದ್ದು, ಇದು ಪೊಲೀಸ್ ಠಾಣಾ ಮೆಟ್ಟಲೇರಿತ್ತು ಎನ್ನಲಾಗಿದೆ. ಇದುವೇ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆದೂರು ಠಾಣಾ ಪೊಲೀಸರು ಸ್ಥಳಕ್ಕಾಗ ಮಿಸಿ ಮಹಜರು ನಡೆಸಿ ಮೃತದೇಹ ಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆ ಗೆ ಸಾಗಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ
ಐದು ವರ್ಷದ ಮಗನ ಕಣ್ಮುಂದೆ ನಡೆದ ಬರ್ಬರ ಕೃತ್ಯ:
ಐದು ವರ್ಷದ ಮಗನ ಕಣ್ಣಮುಂದೆಯಲ್ಲೇ ತಾಯಿಯನ್ನು ಬರ್ಬರವಾಗಿ ಹತ್ಯೆ ನಡೆಸಲಾಗಿದ್ದು, ಏನೂ ಅರಿಯದ ಅಭಿಲಾಷ್ ಅನಾಥನಾಗಿದ್ದಾನೆ. ಘಟನೆ ನಡೆದ ಬಳಿಕ ಸಮೀಪದ ಮನೆಗೆ ಓಡಿ ಬಂದು ವಿವರಿಸಿದ್ದಾನೆ ಪರಿಸರದ ಮನೆಯವರು ಧಾವಿಸಿ ಬಂದಾಗ ಬರ್ಬರ ಕೃತ್ಯ ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
`ಕೊಲೆಗೆ ಅನೈತಿಕ ಸಂಬಂಧ , ಸಂಶಯ ಕಾರಣ?
ಇನ್ನು ಕೃತ್ಯಕ್ಕೆ ಪತ್ನಿಯ ಮೇಲಿನ ಸಂಶಯ ಕಾರಣ ಎನ್ನಲಾಗಿದೆ. ಕೆಲ ಸಮಯದಿಂದ ಇಬ್ಬರ ನಡುವೆ ವಿರಸ ಉಂಟಾಗಿತ್ತು. ಓರ್ವ ಜೆ ಸಿ ಬಿ ಚಾಲಕನ ಜೊತೆ ಬೇಬಿಗೆ ಅನೈತಿಕ ಸಂಬಂಧ ಇದೆ ಎಂದು ವಿಜಯನ್ ಗೆ ಸಂಶಯ ಉಂಟಾಗಿತ್ತು. ಇದರಿಂದ ದಿನಂಪ್ರತಿ ಪತ್ನಿ ಜೊತೆ ಜಗಳವಾಡುತ್ತಿದ್ದ. ಪಾನಮತ್ತನಾಗಿ ಬಂದು ಹಲ್ಲೆ ನಡೆಸುತ್ತಿದ್ದ. ಇದರಿಂದ ಶುಕ್ರವಾರ ಬೇಬಿ ಆದೂರು ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಇಬ್ಬರನ್ನು ಕರೆದು ಸಮಸ್ಯೆ ಪರಿಹರಿಸುವಂತೆ ಪೊಲೀಸರು ಮನವಿ ಮಾಡಿದ್ದರು.
ಇಂದು ಶನಿವಾರ ಜೆಸಿಬಿ ಚಾಲಕನನ್ನು ಠಾಣೆಗೆ ಕರೆಸಿ ಮಾತನಾಡುವುದಾಗಿ ತಿಳಿಸಿ ಇಬ್ಬರನ್ನು ಮನೆಗೆ ಕಳುಹಿಸಲಾಗಿತ್ತು. ಮನೆಗೆ ಬಂದ ಬಳಿಕ ಇಬ್ಬರ ನಡುವೆ ಜಗಳವೇರ್ಪಟ್ಟು ಕೃತ್ಯ ನಡೆಸಲ್ಪಟ್ಟಿದೆ.