ಮಂಗಳೂರು, ಜ.09 (DaijiworldNews/PY): "ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಭಿವೃದ್ದಿ ಪರ ಕಾರ್ಯಗಳಿಂದ ಆತಂಕಗೊಂಡಿದ್ದಾರೆ" ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕಂಕನಾಡಿ ಗರೋಡಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷವು ಬಿಜೆಪಿಗರ ಮೇಲೆ ಅನಗತ್ಯವಾದ ಆರೋಪ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ಆದ್ದರಿಂದ ಅವರು ಗೊಂದಲಕ್ಕೊಳಗಾಗಿದ್ದಾರೆ. ಹಾಗೂ ಅವರ ಅನಗತ್ಯವಾದ ಹೇಳಿಕೆಗಳಿಗೆ ಯಾವುದೇ ಪ್ರಾಮುಖ್ಯತೆಯಿಲ್ಲ" ಎಂದರು.
"ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ಯಾವ ರೀತಿಯಾಗಿ ಯಾತ್ರೆ ಪ್ರವಾಸ ಮಾಡುತ್ತದೆಯೋ ಅದನ್ನು ಅನುಸರಿಸುತ್ತಿದ್ದಾರೆ. ಶಿವಕುಮಾರ್ ಅವರಿಗೆ ಜನರಿಂದ ಯಾವುದೇ ಬೆಂಬಲವಿಲ್ಲ. ಅವರಿಗೆ ತಮ್ಮದೇ ಪಕ್ಷದ ಕಾರ್ಯಕರ್ತರ ಬೆಂಬಲವಿಲ್ಲ. ಈ ಬಗ್ಗೆ ಕಾಂಗ್ರೆಸ್ನಲ್ಲೇ ಗೊಂದಲವಿದೆ. ಸಿದ್ದರಾಮಯ್ಯನವರೇ ಶಿವಕುಮಾರ್ ಅವರ ಕಾರ್ಯ ಶೈಲಿಯನ್ನು ಸ್ವೀಕರಿಸುತ್ತಿಲ್ಲ. ಅವರ ಗೊಂದಲವನ್ನು ಮರೆಮಾಚಲು ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಜನರನ್ನು ಮರುಳು ಮಾಡುವುದು ಸುಲಭವಾಗಿತ್ತು. ಇಂದು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಕಾರಣದಿಂದಾಗಿ ಅದು ಅಷ್ಟು ಸುಲಭವಲ್ಲ ಮತ್ತು ಜನರು ಬಹಳ ಬುದ್ಧಿವಂತರಾಗಿದ್ದಾರೆ ” ಎಂದು ತಿಳಿಸಿದರು.
ಗೋಮಾಂಸ ಸೇವನೆ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಪ್ರಗತಿಪರ ನಾಯಕರಾಗಿರಬಹುದು. ಆದರೆ ಅವರು ಹಿಂದೂಗಳು ಮತ್ತು ಕೊಡವರ ಭಾವನೆಗಳನ್ನು ನೋಯಿಸುತ್ತಿದ್ದಾರೆ. ಕೊಡವರು ಗೋಮಾಂಸವನ್ನು ಸೇವಿಸುತ್ತಾರೆ ಎಂದು ಅವರು ಹೇಳಿದ್ದಾರೆ. ನಾನೂ ಗೋಮಾಂಸವನ್ನು ಸಹ ತಿನ್ನುತ್ತೇನೆ ಎಂದು ಹೇಳುತ್ತಾರೆ. ಸಮುದಾಯದ ಮುಖಂಡರು ಈ ವಿಷಯದ ಬಗ್ಗೆ ಮಾತನಾಡಬೇಕು. ಸಿದ್ದರಾಮಯ್ಯ ಅವರು ನಿರ್ದಿಷ್ಟ ಸಮುದಾಯವನ್ನು ಅವಮಾನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಬೇಕು. ಒಂದು ನಿರ್ದಿಷ್ಟ ಸಮುದಾಯವನ್ನು ಸಮಾಧಾನಪಡಿಸಲು, ಅವರು ಅಂತಹ ನಾಟಕವನ್ನು ಆಡುತ್ತಿದ್ದಾರೆ. ಹಿಂದೂ ಮತ್ತು ಕೊಡವರ ಭಾವನೆಗಳನ್ನು ನೋಯಿಸುವ ಹಕ್ಕು, ಅಧಿಕಾರ ಅವರಿಗಿಲ್ಲ” ಎಂದರು.
ಉಜಿರೆಯಲ್ಲಿ ಪಾಕಿಸ್ತಾನ ಪರ ಘೋಷಣೆಗಳ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಇಂದು ಸಮಾಜ ಎಚ್ಚೆತ್ತುಕೊಳ್ಳಬೇಕು. ಹಲವಾರು ಕಾರ್ಯಕರ್ತರ ಹತ್ಯೆಗೆ ಯಾವ ಎಸ್ಡಿಪಿಐ ಕಾರಣಿಕರ್ತರೋ ಅವರು ಚುನಾವಣೆಗೆ ಸ್ಪರ್ಧಿಸಿ ಒಂದೆರಡು ಸ್ಥಾನ ಗೆದ್ದಾಗ ಪಾಕ್ ಪರ ಘೋಷಣೆ ಕೂಗುವುದು ಅವರ ನಿಲುವನ್ನು ಸ್ಪಷ್ಟಪಡಿಸುತ್ತದೆ. ಅವರು ಯಾರ ಪರವಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಈ ದೇಶದಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆದ ನಂತರ ಅವರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಅವರು ರಾಷ್ಟ್ರ ವಿರೋಧಿಗಳೆಂದು ಘೋಷಿಸಲು ಸಮಯ ತುಂಬಾ ದೂರವಿಲ್ಲ. ಕಾನೂನಿನಲ್ಲಿ ಬದಲಾವಣೆಯ ಅವಶ್ಯಕತೆಯಿದೆ. ಆದ್ದರಿಂದ ನಾವು ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇವೆ" ಎಂದು ಹೇಳಿದರು.
ಪಾಕಿಸ್ತಾನ ಪರ ಘೋಷಣೆ ಪ್ರಕರಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ನಮ್ಮ ಪಕ್ಷದ ಕಾರ್ಯಕರ್ತರು ಎಂದಿಗೂ ಇಂತಹ ಮಾತುಗಳನ್ನು ಹೇಳುವುದಿಲ್ಲ. ಇದು ಅನಗತ್ಯ ಆರೋಪ. ಅವರು ಮಾಡಿರುವ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಮರೆಮಾಡಲು ಅನಗತ್ಯ ಆರೋಪ ಮಾಡುತ್ತಿದ್ದಾರೆ. ಪಾಕಿಸ್ತಾನ ಪರ ಘೋಷಣೆಗಳನ್ನು ಎತ್ತುವ ಎಸ್ಡಿಪಿಐ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು" ಎಂದು ತಿಳಿಸಿದರು.