ನವದೆಹಲಿ, ಜ.09 (DaijiworldNews/PY): "ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆಯ ಮುಖೇನ ಮನುಕುಲವನ್ನು ರಕ್ಷಿಸಲು ಭಾರತ ಸಿದ್ದ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
16ನೇ ಪ್ರವಾಸಿ ಭಾರತೀಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಅಂತರ್ಜಾಲದ ಮೂಲಕ ಜಗತ್ತಿನ ವಿವಿಧ ಮೂಲೆಗಳೊಂದಿಗೆ ಸಂಪರ್ಕ ಹೊಂದಿದ್ದರೂ ಕೂಡಾ ನಮ್ಮ ಮನಸ್ಸು ಎಂದಿಗೂ ಮಾತೃಭೂಮಿ ಬಳಿಯೇ ಇರುತ್ತದೆ" ಎಂದರು.
"ಮೇಡ್ ಇನ್ ಇಂಡಿಯಾ ಎರಡು ಕೊರೊನಾ ಲಸಿಕೆಗಳೊಂದಿಗೆ ಮನುಕುಲದ ರಕ್ಷಣೆಗೆ ಭಾರತದ ಸಿದ್ದ. ಹಾಗೂ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಬಡವರ ಸಬಲೀಕರಣ ಮಾಡುವ ಭಾರತದ ಪ್ರಯತ್ನದ ಬಗ್ಗೆ ಇಡೀ ಜಗತ್ತೇ ಚರ್ಚೆ ಮಾಡುತ್ತಿದೆ" ಎಂದರು.
"ಭಾರತ ಈ ಹಿಂದೆ ಪಿಪಿಇ ಕಿಟ್ಗಳು, ಮಾಸ್ಕ್ಗಳು, ವೆಂಟಿಲೇಟರ್ ಗಳು ಮತ್ತು ಟೆಸ್ಟಿಂಗ್ ಕಿಟ್ಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಇಂದು ದೇಶವು ಸ್ವಾವಲಂಬಿಯಾಗಿದೆ" ಎಂದು ಹೇಳಿದರು.
"ಭಾರತ ಭಯೋತ್ಪಾದನೆಯ ವಿರುದ್ದ ನಿಂತ ಸಂದರ್ಭ, ಈ ಸವಾಲನ್ನು ಎದುರಿಸುವ ಧೈರ್ಯ ಇಡೀ ವಿಶ್ವಕ್ಕೇ ಸಿಕ್ಕಂತಾಯಿತು. ಇಂದು ಭ್ರಷ್ಟಾಚಾರದ ನಿರ್ಮೂಲನೆಗಾಗಿ ಭಾರತ ತಂತ್ರಜ್ಞಾನವನ್ನು ಬಳಸುತ್ತಿದೆ. ಈ ತಂತ್ರಜ್ಞಾನಗಳ ಮೂಲಕವೇ ಲಕ್ಷ ಹಾಗೂ ಕೋಟಿ ಮೌಲ್ಯದ ಹಣವನ್ನು ನೇರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ" ಎಂದು ತಿಳಿಸಿದರು.
"ಬಡವರ ಸಬಲೀಕರಣಕ್ಕೆ ಭಾರತದಲ್ಲಿ ನಡೆಯುತ್ತಿರುವ ಅಭಿಯಾನದ ಬಗ್ಗೆ ಇಂದು ಜಗತ್ತಿನಾದ್ಯಂತ ಚರ್ಚೆಯಾಗುತ್ತಿವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿ ಶೀಲ ರಾಷ್ಟ್ರವೂ ಮುಂಚೂಣಿಗೆ ಬರಬಹುದು ಎನ್ನುವ ವಿಚಾರವನ್ನು ಕೂಡಾ ನಾವು ತೋರಿಸಿಕೊಟ್ಟಿದ್ದೇವೆ" ಎಂದರು.