ಕೊಪ್ಪಳ, ಜ.09 (DaijiworldNews/PY): "ಕೊರೊನಾ ಹಾಗೂ ಅತಿವೃಷ್ಟಿಯ ಕಾರಣದಿಂದ ಈ ವರ್ಷದ ಬಜೆಟ್ನಲ್ಲಿ 40-50 ಸಾವಿರ ಕೋಟಿ ಖೋತಾ ಆಗಲಿದೆ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ ಅಡಿಗಲ್ಲು ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ, ಬರಗಾಲ ಹಾಗೂ ಅತಿವೃಷ್ಟಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸೂಕ್ತವಾಗಿಲ್ಲ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ಅನುದಾನ ಕೊಡಲು ಕಷ್ಟವಾಗಿದೆ. ಕಳೆದ ವರ್ಷ ಬಜೆಟ್ ಕೂಡಾ ಕಡಿಮೆಯಿತ್ತು. ಕೊರೊನಾ ಹಾಗೂ ಅತಿವೃಷ್ಟಿಯ ಕಾರಣದಿಂದ ಈ ವರ್ಷದ ಬಜೆಟ್ನಲ್ಲಿ 40-50 ಸಾವಿರ ಕೋಟಿ ಖೋತಾ ಆಗಲಿದೆ" ಎಂದು ತಿಳಿಸಿದರು.
ಯುವರಾಜ್ ಸ್ವಾಮಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸೋಮಣ್ಣ ಸೇರಿದಂತೆ ಇತರೆ ಬಿಜೆಪಿ ನಾಯಕರು ಯುವರಾಜ್ನೊಂದಿಗೆ ಫೋಟೋದಲ್ಲಿ ಇರುವ ಬಗ್ಗೆ ನಾನೇನು ಪ್ರತಿಕ್ರಿಯಿಸಲಿ. ಯುವರಾಜ್ ಸ್ವಾಮಿ ವಂಚನೆ ಪ್ರಕರಣದ ಬಗ್ಗೆ ತನಿಖೆಯಾಗುತ್ತಿದೆ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿದ್ದಾರೆ. ಯಾರೊಂದಿಗೋ ಫೋಟೋ ಇದ್ದರೆ ಅಪರಾಧ ಆಗುವುದಿಲ್ಲ" ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಚಿವ ಸಂಪುಟ ವಿಸ್ತರಣೆ ಮುಂದೂಡುವ ವಿಷಯ ಅನಿವಾರ್ಯ. ಕೇಂದ್ರದಲ್ಲಿ ಯಾವಾಗ ಸಚಿವ ಸಂಪುಟ ವಿಸ್ತರಣೆ ಮಾಡು ಎನ್ನುತ್ತಾರೋ ಆಗ ಸಂಪುಟ ವಿಸ್ತರಣೆ ಮಾಡುವೆ" ಎಂದು ತಿಳಿಸಿದರು.