ಬೆಂಗಳೂರು, ಜ.09 (DaijiworldNews/PY): "ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈಗಲೂ ಪ್ರಬಲವಾಗಿದೆ. ಇದಕ್ಕೆ ಮೊನ್ನೆಯ ಗ್ರಾಮಪಂಚಾಯತ್ ಚುನಾವಣಾ ಫಲಿತಾಂಶವೇ ಸಾಕ್ಷಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬೆಂಗಳೂರು ವಿಭಾಗದ ವಿವಿಧ ಜಿಲ್ಲೆಗಳ ಸ್ಥಳೀಯ ಮುಖಂಡರ ಜೊತೆಗಿನ ಸಮಾಲೋಚನೆ ಹಾಗೂ ಸಂಕಲ್ಪ ಸಮಾವೇಶದ ಸಂದರ್ಭದ ಹೇಳಿಕೆಗಳನ್ನು ಟ್ವೀಟ್ ಮಾಡಿರುವ ಅವರು, "ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವೇನಾದರೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದಿದ್ದರೆ ದೇಶ ಇಂದಿಗೂ ಬ್ರಿಟಿಷರ ಗುಲಾಮಗಿರಿಯಲ್ಲೇ ಇರಬೇಕಿತ್ತು. ಇದು ಕಾಂಗ್ರೆಸ್ ಬೆಳೆದು ಬಂದ ಹಾದಿ. ಆದರೆ ನಮ್ಮಂತೆ ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರೇನಿದ್ದರೂ ಸ್ವಾತಂತ್ರ್ಯದ ಫಲಾನುಭವಿಗಳು ಮಾತ್ರ" ಎಂದಿದ್ದಾರೆ.
"ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈಗಲೂ ಪ್ರಬಲವಾಗಿದೆ. ಇದಕ್ಕೆ ಮೊನ್ನೆಯ ಗ್ರಾಮಪಂಚಾಯತ್ ಚುನಾವಣಾ ಫಲಿತಾಂಶವೇ ಸಾಕ್ಷಿ. ಈ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಕೂಡ ಹೌದು. ಈ ವಿಚಾರದಲ್ಲಿ ಸಿಎಂ ಬಿಎಸ್ವೈ ಅವರು ಎಷ್ಟೇ ಸುಳ್ಳು ಹೇಳಿದ್ರೂ ವಾಸ್ತವ ಬದಲಾಗಲಾರದು" ಎಂದು ಹೇಳಿದ್ದಾರೆ.
"ಜೆಡಿಎಸ್ ಪಕ್ಷದ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕಾದ ನಷ್ಟವೇ ಹೆಚ್ಚು. ಒಂದು ವೇಳೆ ಸಮ್ಮಿಶ್ರ ಸರ್ಕಾರ ರಚನೆಯಾಗದೆ ಇದ್ದಿದ್ದರೆ ನಮ್ಮ ಪಕ್ಷದ 14 ಮಂದಿ ಶಾಸಕರು ಪಕ್ಷ ಬಿಟ್ಟುಹೋಗುವ ಸಂದರ್ಭ ಉದ್ಭವವಾಗುತ್ತಲೇ ಇರಲಿಲ್ಲ ಎಂಬುದು ನನ್ನ ಅಭಿಪ್ರಾಯ" ಎಂದಿದ್ದಾರೆ.
"ಬಸವಣ್ಣನವರ ಚಿಂತನೆಗಳ ಮರುಸ್ಥಾಪನೆಗಾಗಿ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂದು ಗೊ.ರು ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದು, ಅನುಭವ ಮಂಟಪ ನಿರ್ಮಾಣಕ್ಕೆ ಮುನ್ನುಡಿ ಬರೆದದ್ದು ನಮ್ಮ ಸರ್ಕಾರ. ಆದರೆ ಈಗ ಯಡಿಯೂರಪ್ಪ ಅವರು ನಿರ್ಮಾಣ ಮಾಡಲು ಹೊರಟಿರುವ ಅನುಭವ ಮಂಟಪ ಬಸವ ತತ್ವಗಳಿಗೆ ವಿರುದ್ಧವಾಗಿದೆ" ಎಂದು ತಿಳಿಸಿದ್ದಾರೆ.
"ಸನಾತನ ಧರ್ಮದಲ್ಲಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಮುಂತಾದ ಅನಿಷ್ಟ ಪದ್ಧತಿಗಳ ವಿರುದ್ಧ ಸಿಡಿದೆದ್ದು ಅನುಭವ ಮಂಟಪ ಸ್ಥಾಪಿಸಿ, ಅಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿ, ಮನುಕುಲಕ್ಕೆ ಸಮಾನತೆಯನ್ನು ಸಾರಿದವರು ಜಗಜ್ಯೋತಿ ಬಸವೇಶ್ವರರು" ಎಂದು ಹೇಳಿದ್ದಾರೆ.
"ಯಡಿಯೂರಪ್ಪ ಅವರು ಆರ್.ಎಸ್.ಎಸ್ ನವರ ಮುಲಾಜಿಗೆ ಒಳಗಾಗಿ ಅನುಭವ ಮಂಟಪ ಸ್ಥಾಪನೆ ಮೂಲಕ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ಅನುಭವ ಮಂಟಪ ಬಸವ ತತ್ವವನ್ನು ಸಾರುವಂತಿರಬೇಕೇ ಹೊರತು, ಬಸವಣ್ಣನವರೇ ವಿರೋಧಿಸಿದ ಸನಾತನ ಚಿಂತನೆಗಳನ್ನಲ್ಲ" ಎಂದಿದ್ದಾರೆ.
"ಬಿಜೆಪಿಯವರ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಹಿಂದಿನ ಉದ್ದೇಶ ಸಂವಿಧಾನ ಬದಲಾವಣೆ ಮತ್ತು ವರ್ಣವ್ಯವಸ್ಥೆಯ ಮರುಸ್ಥಾಪನೆಯಾಗಿದೆ. ಸಮಾಜದಲ್ಲಿ ತಾರತಮ್ಯ ಜೀವಂತವಾಗಿದ್ದರೆ ಮತಧ್ರುವೀಕರಣ ಸಾಧ್ಯ ಎಂಬುದು ಬಿಜೆಪಿಯ ಲೆಕ್ಕಾಚಾರ. ಇದನ್ನು ಜನ ಅರ್ಥಮಾಡಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
"ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತೆಯ ಪ್ರಮಾಣ ಶೇ.15 ಇತ್ತು, ಈಗ ಶೇ.76ಕ್ಕೆ ತಲುಪಿದೆ. ಇಂದು ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆಗಳಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿಯವರಲ್ಲ. ಸಾಧನೆಯ ಅರ್ಥವೇ ಗೊತ್ತಿಲ್ಲದವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಅಂತ ಪ್ರಶ್ನೆ ಮಾಡುತ್ತಾರೆ"ಎಂದಿದ್ದಾರೆ.