ಅಹ್ಮದಾಬಾದ್, ಜ.09 (DaijiworldNews/PY): ಗುಜರಾತ್ನ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಧವ್ ಸಿಂಗ್ (94) ಸೋಲಂಕಿ ಅವರು ಶನಿವಾರ ನಿಧನರಾದರು.
ಸೋಲಂಕಿ ಅವರು ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದು, ನಾಲ್ಕು ಬಾರಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಸೋಲಂಕಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, "ಸೋಲಂಕಿ ಅವರು ಅಸಾಧಾರಣ ನಾಯಕರಾಗಿದ್ದರು. ಗುಜರಾತ್ನ ರಾಜಕೀಯದಲ್ಲಿ ಅವರು ದಶಕಗಳಿಂದ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಮಾಜಕ್ಕೆ ಮಾಡಿದ ಸೇವೆಗಾಗಿ ಅವರನ್ನು ಸ್ಮರಿಸಲಾಗುವುದು. ಅವರ ನಿಧನದಿಂದ ಬಹಳ ಬೇಸರವಾಗಿದೆ. ಅವರ ಪುತ್ರ ಭಾರತ್ ಸೋಲಂಕಿ ಅವರೊಂದಿಗೆ ಮಾತನಾಡಿದ್ದು, ಸಂತಾಪ ಸೂಚಿಸಿದ್ದೇನೆ ಓಂ ಶಾಂತಿ" ಎಂದಿದ್ದಾರೆ.
"ರಾಜಕೀಯದ ಬಳಿಕ ಅವರಿಗೆ ಓದುವ ಹವ್ಯಾಸವು ಇತ್ತು. ಅವರಿಗೆ ಸಂಸ್ಕೃತಿಯ ಬಗ್ಗೆ ಒಲವಿತ್ತು. ನಾನು ಅವರನ್ನು ಭೇಟಿಯಾದಾಗ ಅಥವಾ ಅವರೊಂದಿಗೆ ಮಾತನಾಡುವಾಗ ನಾವು ಪುಸ್ತಕಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಆ ವೇಳೆ ಅವರು ಇತ್ತೀಚೆಗೆ ಓದಿದ ಹೊಸ ಪುಸ್ತಕಗಳ ಬಗ್ಗೆ ಹೇಳುತ್ತಿದ್ದರು" ಎಂದು ತಿಳಿಸಿದ್ದಾರೆ.
ಸೋಲಂಕಿ ಅವರು ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿದ್ದರು. ಅಲ್ಲದೇ ಅವರು ಭಾರತದ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.