ಬೆಂಗಳೂರು, ಜ.09 (DaijiworldNews/PY): ಯುವರಾಜ್ ಸ್ವಾಮಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಿಸಿಬಿ ಪೊಲೀಸ್ ಅಧಿಕಾರಿಗಳು ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಚಾರಣೆಯ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಪೊಲೀಸ್ ಸಹಾಯಕ ಆಯುಕ್ತ ಹೆಚ್.ಎಂ.ನಾಗರಾಜ್ ಅವರು, "ರಾಧಿಕಾ ಕುಮಾರಸ್ವಾಮಿ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದ್ದು, ಯುವರಾಜ್ ಅವರಿಗೆ ರಾಧಿಕಾ ಅವರು ಹಣ ವರ್ಗಾವಣೆ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂಬರುವ ಸಿನಿಮಾವೊಂದಕ್ಕೆ ಹಣವನ್ನು ಸಂಭಾವನೆಯಗಿ ಪಡೆಯಲಾಗಿದ್ದು, ಅಕ್ರಮ ವ್ಯವಹಾರಗಳಿಗೆ ಸಹಕರಿಸಿಲ್ಲ. ತನಿಖೆಗೆ ಅಗತ್ಯವಿದ್ದಲ್ಲಿ ರಾಧಿಕಾ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲಾಗುವುದು" ಎಂದಿದ್ದಾರೆ.
"ವಿಚಾರಣೆಯ ಸಂದರ್ಭ ರಾಧಿಕಾ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಈ ವಿಚಾರವಾಗಿ ಹೆಚ್ಚಿನ ವಿಷಯ ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ಸಿಸಿಬಿ ವಿಚಾರಣೆಯು ಪೂರ್ಣಗೊಂಡ ನಂತರ ರಾಧಿಕಾ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, "ನಾನು ಸಿಸಿಬಿ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಪುನಃ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದರೆ ಪುನಃ ಬರುತ್ತೇನೆ. ಹಣ ವರ್ಗಾವಣೆ ವಿಚಾರದ ಬಗ್ಗೆ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ಮುಚ್ಚಿಡುವ ವಿಷಯವೇನೂ ಇಲ್ಲ" ಎಂದಿದ್ದಾರೆ.