ಉಳ್ಳಾಲ, ಜ 08 (DaijiworldNews/SM): ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಮಹಮ್ಮದ್ ನಲಪ್ಪಾಡ್ ಬೆಂಬಲಿಗರಿದ್ದ ಕಾರು ಮಗುವಿಗೆ ಢಿಕ್ಕಿ ಹೊಡೆದಿರುವ ಘಟನೆ ದೇರಳಕಟ್ಟೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇದನ್ನು ತಪ್ಪಾಗಿ ಭಾವಿಸಿದ ಸ್ಥಳೀಯರು ಹೊರ ಜಿಲ್ಲೆಯಿಂದ ಮಕ್ಕಳ ಕಳ್ಳರು ಆಗಮಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬೆಂಗಳೂರಿನಿಂದ ಮಹಮ್ಮದ್ ನಲಪ್ಪಾಡ್ ಬೆಂಬಲಿಗರಿದ್ದ 12 ಮಂದಿಯ ತಂಡ ಎರಡು ಕಾರುಗಳಲ್ಲಿ ಮಂಗಳೂರು ಕ್ಷೇತ್ರ ಪ್ರವಾಸ ಕೈಗೊಂಡಿದ್ದರು. ಮುಡಿಪು, ಕೊಣಾಜೆ, ಹರೇಕಳ ಭಾಗಗಳಲ್ಲಿ ಪ್ರವಾಸ ನಡೆಸಿದ ತಂಡ, ಚುನಾವಣಾ ಪ್ರಚಾರ ನಡೆಸಿ ಮಂಗಳೂರಿಗೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭ ದೇರಳಕಟ್ಟೆ ಬಳಿ ರಸ್ತೆ ದಾಟುತ್ತಿದ್ದ ಮಗುವಿಗೆ ಕಾರು ಡಿಕ್ಕಿ ಹೊಡೆದಿದೆ. ಕೂಡಲೇ ಮಗುವಿನತ್ತ ತಂಡ ಕಾರಿನಿಂದ ಇಳಿದು ಬರುತ್ತಿದ್ದಂತೆ ಸ್ಥಳೀಯವಾಗಿ ಬೆಂಬಲಿಗರನ್ನು ಮಕ್ಕಳ ಕಳ್ಳರು ಎಂದು ಅಪಪ್ರಚಾರ ನಡೆಸಿದ್ದಾರೆ.
ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಸುಳ್ಳು ಸುದ್ಧಿಯನ್ನು ಹರಿಯಲಾರಂಭಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹಲವು ಮಂದಿ ಜಮಾಯಿಸಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಎರಡು ಕಾರುಗಳಲ್ಲಿದ್ದ ತಂಡವನ್ನು ಕೊಣಾಜೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.