ಉಳ್ಳಾಲ, ಜ 08 (DaijiworldNews/SM): ಟೈಲರ್ ವೃತ್ತಿ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಮಹಿಳೆಯ ತಲೆಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಘಟನೆಗೆ ಕಾರಣ ನಿಗೂಢವಾಗಿದ್ದು, ಮಹಿಳೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯ ಮಿರಾಕಲ್ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬ್ಲಮೊಗರುವಿನ ಮದಕ ಸಮೀಪದ ತಾರಿಗುಡ್ಡೆ ನಿವಾಸಿ ದಿನೇಶ್ ಎಂಬವರ ಪತ್ನಿ ಶೋಭಾ(30) ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯಾಗಿದ್ದಾರೆ.
ಜ.5 ರಂದು ತೊಕ್ಕೊಟ್ಟುವಿನಿಂದ ಬಸ್ಸಿನಲ್ಲಿ ಹೊರಟವರು ಮನೆಗೆ ತಲುಪಿರಲಿಲ್ಲ. ಮನೆ ಮಂದಿಗೆ ಶೋಭಾ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆಸ್ಪತ್ರೆಯಿಂದಲೇ ಮಾಹಿತಿ ಸಿಕ್ಕಿದೆ. ಶೋಭಾ ಅವರ ಬಳಿಯಿದ್ದ ಐಡಿ ಕಾರ್ಡಿನಲ್ಲಿದ್ದ ವಿಳಾಸದ ಮೂಲಕ ಮನೆ ಮಂದಿಗೆ ಮಾಹಿತಿ ನೀಡಲಾಗಿತ್ತು. ಮನೆ ಮಂದಿ ಆಸ್ಪತ್ರೆಗೆ ಬರುವಷ್ಟರಲ್ಲಿ ಶೋಭಾ ಅವರು ಮಾತನಾಡದ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ.
ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದ ರಿಕ್ಷಾ ಚಾಲಕ!
ಇನ್ನು ಆಸ್ಪತ್ರೆಯಲ್ಲಿ ಶೋಭಾ ಅವರ ಪರಿಸ್ಥಿತಿ ಕಂಡ ಬಳಿಕ ಈ ಕುರಿತು ಆಸ್ಪತ್ರೆಯ ಸಿಬ್ಬಂದಿಗಳನ್ನು ಅವರು ಪ್ರಶ್ನಿಸಿದ್ದಾರೆ. ರಿಕ್ಷಾ ಚಾಲಕನೊಬ್ಬ ಆಸ್ಪತ್ರೆಗೆ ಆಗಮಿಸಿ ಮಹಿಳೆಯನ್ನು ಇಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಗಾಯಾಳು ಮಹಿಳೆಯನ್ನು ತಂದು ಆಸ್ಪತ್ರೆಯ ತುರ್ತು ನಿಗಾ ಘಟಕದ ಎದುರು ಕುಳ್ಳಿರಿಸಿ ಅಲ್ಲಿಂದ ಆತ ಕಣ್ಮರೆಯಾಗಿದ್ದಾನೆ ಎಂದು ಆಸ್ಪತ್ರೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಮಾನವೀಯತೆ ಮೆರೆದ ಆಸ್ಪತ್ರೆ ಸಿಬ್ಬಂದಿಗಳು:
ಇನ್ನು ಏಕಾಂಗಿಯಾಗಿ ಗಾಯಗೊಂಡು ಆಸ್ಪತ್ರೆಯ ತುರ್ತು ನಿಗಾ ಘಟಕದ ಸಮೀಪದಲ್ಲಿದ್ದ ಮಹಿಳೆಯನ್ನು ಕಂಡ ಆಸ್ಪತ್ರೆಯ ಸಿಬ್ಬಂದಿಗಳು ತಕ್ಷಣ ಸ್ಪಂಧಿಸಿದ್ದಾರೆ. ಹಾಗೂ ಗಾಯಾಳು ಮಹಿಳೆಗೆ ಚಿಕಿತ್ಸೆ ಆರಂಭಿಸಿದ್ದಾರೆ. ಮಹಿಳೆ ಏಕಾಂಗಿಯಾಗಿದ್ದಾರೆ, ಮನೆಮಂದಿ ಬರಬೇಕೆಂದು ಕಾಯದೆ ಸಿಬ್ಬಂದಿಗಳು ಮಾನವೀಯತೆಯ ದೃಷ್ಠಿಯಿಂದ ಚಿಕಿತ್ಸೆ ಆರಂಭಿಸಿದ್ದಾರೆ.
ಇನ್ನು ರಿಕ್ಷಾ ಚಾಲಕ ಮಹಿಳೆಯನ್ನು ಆಸ್ಪತ್ರೆಗೆ ಕರೆ ತಂದು ಬಿಟ್ಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ತನಿಖೆ ನಡೆಯಬೇಕಿದೆ. ಮತ್ತೊಂದೆಡೆ ಮಹಿಳೆ ಚೇತರಿಸಿಕೊಂಡ ಬಳಿಕ ಘಟನೆಯ ಬಗ್ಗೆ ವಿವರ ನೀಡಬಹುದು ಎನ್ನಲಾಗಿದೆ.