ಬೆಂಗಳೂರು, ಜ. 08 (DaijiworldNews/SM): ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ರಾಜ್ಯದ ಕೆಲವು ಕಡೆಗಳಾಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. ರಾಜ್ಯದಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ, ಗಡಿಭಾಗಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಮಾಂಸ ಹಾಗೂ ಮೊಟ್ಟೆ ಬೆಯಿಸಿ ತಿನ್ನುವುದಕ್ಕೆ ಯಾವುದೇ ಆತಂಕ ಬೇಡ ಎಂದು ರಾಜ್ಯ ಪಶು ವೈದ್ಯಕೀಯ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ರಾಜ್ಯ ಮಟ್ಟದ ಕೋಳಿ ಶೀತ ಜ್ವರ/ಹಕ್ಕಿ ಜ್ವರದ ಉನ್ನತ ಮಟ್ಟದ ಸಮಿತಿಯ ಸಭೆಯನ್ನು ಸಚಿವರು ನಡೆಸಿದ್ದಾರೆ. ರೋಗ ತಡೆಗಟ್ಟುವ ಕುರಿತಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಹಕ್ಕಿ ಜ್ವರ ಹರಡದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿದೆ ಎಂದಿರುವ ಅವರು, ಗಡಿ ಭಾಗಗಳಾದ ಚಾಮರಾಜ ನಗರ, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬರುವ ಕೋಳಿ ಸಾಗಾಣಿಕ ವಾಹನಗಳನ್ನು ಸ್ಯಾನಿಟೈಸ್ ಮಾಡಿಸುವ ಕುರಿತು ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸದ್ಯ ಅಂತಾರಾಜ್ಯ ನಿರ್ಬಂಧಗಳಿಗೆ ಅವಕಾಶವಿಲ್ಲ. ಆದರೆ, ಈ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಇನ್ನು ಕೋಳಿ ಮಾಂಸ ಸೇವನೆ ಹಾಗೂ ಮೊಟ್ಟೆ ಸೇವನೆ ವಿಚಾರದಲ್ಲಿ ಅಪಪ್ರಚಾರಗಳು ನಡೆಯುತ್ತಿದೆ. ಮಾಂಸ ಹಾಗೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅದರಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.