ಕಾರ್ಕಳ, ಜ. 08 (DaijiworldNews/SM): ಯುವ ಕಾಂಗ್ರೆಸ್ಸಿನ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಉಂಟಾಗಿದ್ದು,
ಪಕ್ಷದ ಆಂತರಿಕ ಹುದ್ದೆಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಲಾಂಗು ಮಚ್ಚುಗಳನ್ನು ಹಿಡಿದು ಹೊಡೆದಾಡುವ ಘಟನೆ ಬಜಗೋಳಿ ನಲ್ಲೂರು ಭಾಗದಲ್ಲಿ ನಡೆದಿರುವುದು ಖಂಡನೀಯವಾಗಿದೆ.
ಕಾರ್ಯಕರ್ತನ ಮೇಲೆ ಲಾಂಗ್ ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪೊಲೀಸ್ ಠಾಣೆಯ ಮೆಟ್ಟಿಲೇರಿದರು ಕೂಡ ಹಿರಿಯ ಕಾಂಗ್ರೆಸ್ಸಿಗರ ಕುಮ್ಮಕ್ಕಿನಿಂದ ರಾಜಿ ಸಂದಾನವಾಗಿದ್ದು, ಪೆಟ್ಟು ತಿಂದ ಯುವಕ ಈಗ ಅನಾಥನಾಗಿದ್ದಾನೆ.
ಪಕ್ಷದ ಆಂತರಿಕ ಹುದ್ದೆಗಾಗಿ ತನ್ನ ಕಾರ್ಯಕರ್ತರ ಜೊತೆ ಹೊಡೆದಾಡುವ ಕಾಂಗ್ರೆಸ್ ಕಾರ್ಯಕರ್ತರ ಮನಸ್ಥಿತಿ ಹೀನ ಮಟ್ಟಕ್ಕೆ ಇಳಿದಿದ್ದು ಲಾಂಗ್ ಮಚ್ಚುಗಳನ್ನು ಹಿಡಿದುಕೊಂಡು ತಿರುಗುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಯಾವ ನೈತಿಕತೆಯಲ್ಲಿ ಜನರ ಬಳಿಗೆ ಬರುತ್ತಾರೆ? ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಕೂಡ ಕಾಂಗ್ರೆಸ್ಸಿನ ಹಿರಿಯ ಮುಖಂಡರು ಸೇರಿದಂತೆ ಯುವ ಕಾರ್ಯಕರ್ತರು ತಮ್ಮ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾ ನಗೆಪಾಟಲಿಗೆ ಈಡಾಗಿದ್ದಾರೆ.
ತನ್ನ ಪಕ್ಷದ ಹುದ್ದೆಗಾಗಿ ಕಾರ್ಯಕರ್ತರ ನಡುವೆ ಹೊಡೆದಾಟ ಆರಂಭವಾಗಿರುವುದು ನಾಚಿಕೆಗೇಡು ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ ಶೆಟ್ಟಿ, ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮುಟ್ಲುಪ್ಪಾಡಿ ಸುಹಾಸ್ ಶೆಟ್ಟಿ ತಿಳಿಸಿದ್ದಾರೆ.