ಮಂಗಳೂರು, ಜ 08 (DaijiworldNews/SM): ಕರಾವಳಿ ಭಾಗದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಉಳ್ಳಾಲದ ಮಂಜನಾಡಿಯಲ್ಲಿ ಸತ್ತು ಬಿದ್ದಿದ್ದ ಕಾಗೆಗಳ ಪರೀಕ್ಷಾ ವರದಿ ಲಭ್ಯವಾಗಿದ್ದು, ಹಕ್ಕಿಜ್ವರವಿಲ್ಲ ಎಂಬು ದೃಢಪಟ್ಟಿದೆ. ಆ ಮೂಲಕ ಕರಾವಳಿ ಭಾಗದಲ್ಲಿ ಎದುರಾಗಿದ್ದ ಆತಂಕ ದೂರವಾದಂತಾಗಿದೆ.
ಜನವರಿ ೫ರ ಮಂಗಳವಾರದಂದು ಮಂಜನಾಡಿ ಪರಿಸರದಲ್ಲಿ ಕಾಗೆಗಳ ಕಳೆಬರ ಪತ್ತೆಯಾಗಿತ್ತು. ಸುಮಾರು ಐದು ಕಾಗೆಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಇನ್ನು ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದರಿಂದ ಕಾಗೆಗಳ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿತ್ತು. ಕರಾವಳಿ ಭಾಗಕ್ಕೂ ಹಕ್ಕಿ ಜ್ವರ ಕಾಲಿರಿಸಿತಾ ಎಂಬ ಭೀತಿ ಎದುರಾಗಿತ್ತು.
ಈ ನಡುವೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಕಾಗೆಯೊಂದರ ಮೃತದೇಹವನ್ನು ಪರೀಕ್ಷೆಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿತ್ತು. ಮಂಜನಾಡಿ ಗ್ರಾಮದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು.
ಇದೀಗ ಪರೀಕ್ಷಾ ವರದಿ ಲಭ್ಯವಾಗಿದೆ. ಸತ್ತು ಬಿದ್ದಿರುವ ಕಾಗೆಗಳಲ್ಲಿ ಹಕ್ಕಿ ಜ್ವರದ ಲಕ್ಷಣಗಳಿಲ್ಲ ಎಂದು ದೃಢವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ.