ನವದೆಹಲಿ, ಜ.08 (DaijiworldNews/PY): ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಇಂದು ಸರ್ಕಾರ ಹಾಗೂ ರೈತ ಮುಖಂಡರ ನಡುವೆ ನಡೆದ 8ನೇ ಸುತ್ತಿನ ಮಾತುಕತೆಯೂ ಕೂಡಾ ವಿಫಲವಾಗಿದ್ದು, ಜ.15ರಂದು 9ನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸಚಿವ ತೋಮರ್ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ನಡೆದ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರವು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಿರಾಕರಿಸುತ್ತಿದೆ. ಆದರೆ, ನಮ್ಮ ಆದಾಯಕ್ಕೆ ಈ ಕಾಯ್ದೆಗಳಿಂದ ತೊಂದರೆ ಉಂಟಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜನವರಿ 26ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಗಣರಾಜ್ಯೋತ್ಸವದಂದು ದೆಹಲಿಗೆ ನುಗ್ಗುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಅದಕ್ಕೆಂದು ರಾಜಧಾನಿಯ ಹೊರವಲಯದಲ್ಲಿ ಗುರುವಾರ ಟ್ರಾಕ್ಟರ್ ತಾಲೀಮು ಕೂಡ ಪ್ರಾರಂಭಿಸಿದ್ದರು.