ಬದಾಯುಂ, ಜ. 08 (DaijiworldNews/MB) : ಉತ್ತರಪ್ರದೇಶದ ಬದಾಯುಂನಲ್ಲಿ 50 ವರ್ಷದ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು ಈ ಹೇಳಿಕೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ''ಹೊರಗೆ ಒಂಟಿಯಾಗಿ ಹೋದ ಕಾರಣ ಅತ್ಯಾಚಾರವಾಗಿದೆ'' ಎಂದು ಈ ಸದಸ್ಯೆ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ಮೃತ ಸಂತ್ರಸ್ಥೆಯ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿ, ''ಸಂಜೆ ಸಮಯ ಮಹಿಳೆ ಮನೆಯಿಂದ ಹೊರಗೆ ಹೋಗದಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ನಾನು ಮಹಿಳೆಯರಿಗೆ ಹೇಳುವುದಿಷ್ಟೆ ಸಂಜೆ ಹೊತ್ತಲ್ಲಿ ಯಾವುದೇ ಕಾರಣಕ್ಕೂ ನೀವು ಮನೆಯಿಂದ ಹೋಗಬೇಡಿ. ಮಹಿಳೆ ಒಂಟಿಯಾಗಿ ಹೋಗಬಾರದಿತ್ತು. ಮನೆಯಿಂದ ಒಂದು ಮಗುವನ್ನು ಜೊತೆಯಲ್ಲಿ ಕರೆದೊಯ್ಯುತ್ತಿದ್ದರೂ ಈ ಘಟನೆ ನಡೆಯುತ್ತಿರಲಿಲ್ಲ. ಆದರೆ ಆಕೆಯನ್ನು ಫೋನ್ ಮಾಡಿ ಕರೆಯಲಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ'' ಎಂದು ಹೇಳಿಕೊಂಡಿದ್ದಾರೆ.
ಮಹಿಳೆಯು ಭಾನುವಾರ ಮಧ್ಯಾಹ್ನ ದೇವಸ್ಥಾನಕ್ಕೆ ತೆರಳಿದ್ದ ಸಂದರ್ಭ ಪುರೋಹಿತ ಸತ್ಯ ನಾರಾಯಣ ಸೇರಿದಂತೆ ಮೂವರು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಾಲಿವುಡ್ ನಟಿ, ನಿರ್ಮಾಪಕಿ ಪೂಜಾ ಭಟ್ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ''ನಿಮ್ಮ ಪ್ರತಿನಿಧಿ ಕೊಟ್ಟಿರುವ ಹೇಳಿಕೆಯ ಪರವಾಗಿ ನೀವು ನಿಲ್ಲುವಿರೇ'' ಎಂದು ಅವರು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷೆ ರೇಖಾ ಶರ್ಮಾ, ''ಮಹಿಳಾ ಆಯೋಗದ ಸದಸ್ಯೆಯಾಗಿರುವ ಅವರು ಯಾಕೆ ಮತ್ತು ಹೇಗೆ ಈ ರೀತಿಯ ಹೇಳಿಕೆ ನೀಡಿದರು ಎಂದು ನನಗೆ ತಿಳಿಯಲಿಲ್ಲ. ಮಹಿಳೆಗೆ ತನಗೆ ಇಚ್ಛೆಯಂತೆ ಯಾವ ಸಮಯದಲ್ಲಿ ಎಲ್ಲಿ ಬೇಕಾದರೂ ಹೋಗುವ ಹಕ್ಕು ಇದೆ. ಮಹಿಳೆಯ ಸುರಕ್ಷತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ'' ಎಂದು ಹೇಳಿದ್ದಾರೆ.