ಬೆಂಗಳೂರು, ಜ. 08 (DaijiworldNews/MB) : ''ಕೊರೊನಾ ಲಸಿಕೆ ರಾಜ್ಯಕ್ಕೆ ಇನ್ನೆರಡು ದಿನದಲ್ಲಿ ತಲುಪಲಿದೆ'' ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯಕ್ಕೆ ಕೇಂದ್ರದಿಂದ ಇನ್ನೆರಡು ದಿನದಲ್ಲಿ 13.90 ಲಕ್ಷ ಲಸಿಕೆಯನ್ನು ಬಿಡುಗಡೆಯಾಗಲಿದ್ದು, ಅಧಿಕೃತ ಆದೇಶ ದೊರತ ಬಳಿಕ ವಿತರಣೆ ಆರಂಭ ಮಾಡಲಾಗುವುದು'' ಎಂದು ಹೇಳಿದರು.
''ನಾಳೆ ಮೊದಲ ಹಂತದ ಲಸಿಕೆ ರಾಜ್ಯಕ್ಕೆ ತಲುಪಲಿದೆ. ನಾವು ಅದರ ಮಾರ್ಗಸೂಚಿ ಪ್ರಕಾರ ಸಂಗ್ರಹ ಮಾಡುತ್ತೇವೆ. ಕೊರೊನಾ ಲಸಿಕೆ ಲಭಿಸಿರುವ ವಿಚಾರ ನಮಗೆ ಸಂತೋಷ ಉಂಟು ಮಾಡಿದೆ'' ಎಂದು ತಿಳಿಸಿದರು.
''ಮೊದಲ ಹಂತದಲ್ಲಿ 13.90 ಲಕ್ಷ ಕೊರೊನಾ ಲಸಿಕೆ ಲಭಿಸಲಿದೆ. ಮೊದಲು ನಾವು ಆಶಾ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್ಗಳಿಗೆ ಆದ್ಯತೆ ನೀಡುತ್ತೇವೆ. ಬಳಿಕ ಕೇಂದ್ರದಿಂದ ಅನುಮತಿ ದೊರೆತ ಕೂಡಲೇ ಸಾರ್ವಜನಿಕರಿಗೆ ನೀಡಲಾಗುವುದು. ಅದಕ್ಕಾಗಿ 24 ಜಿಲ್ಲೆಗಳಲ್ಲಿ 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದೆ. ಲಸಿಕೆಗಾಗಿ ಈವರೆಗೆ 6.30 ಲಕ್ಷ ಆರೋಗ್ಯ ಕಾರ್ಯಕರ್ತರು ನೋಂದಾವಣೆ ಮಾಡಿದ್ದಾರೆ. ಕಂದಾಯ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿರುವ 60 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ'' ಎಂದು ಕೂಡಾ ಇದೇ ಸಂದರ್ಭ ಮಾಹಿತಿ ನೀಡಿದರು.
ಇನ್ನು ''ಲಸಿಕೆ ವಿತರಣೆ ವಿಚಾರವಾಗಿ ಸಾಮಾಜಿಕ ಜಾಲತಾಣದ ಮುಖೇನ ಸಾರ್ವಜನಿಕರಿಗೆ ಮುಖ್ಯ ಮಾಹಿತಿಗಳನ್ನು ನೀಡಲಾಗುತ್ತದೆ'' ಎಂದು ಹೇಳಿದ ಅವರು, ''ಈ ನಿಟ್ಟಿನಲ್ಲಿ ಇಲಾಖೆಯು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ'' ಎಂದು ತಿಳಿಸಿದ್ದಾರೆ.