ಬೆಳಗಾವಿ, ಜ.08 (DaijiworldNews/PY): "ಯುವರಾಜ್ ಸ್ವಾಮಿ ಹಾಗೂ ಬಿಜೆಪಿಗೆ ಯಾವುದೇ ರೀತಿಯಾದ ಸಂಬಂಧವಿಲ್ಲ" ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಸ್ಪಷ್ಟನೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಒಂದು ತಿಂಗಳಿನಿಂದ ಯುವರಾಜ್ ಸ್ವಾಮಿ ಎನ್ನುವವರು ಬಿಜೆಪಿ ಕಾರ್ಯಕರ್ತ, ಆರ್ಎಸ್ಎಸ್ ಮುಖಂಡ ಎಂದು ಹೇಳಿ ಮೋಸ ಮಾಡಿದ್ದಾರೆ. ಈತ ನಟ-ನಟಿಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದು ಮಾತ್ರವಲ್ಲದೇ, ಹಣಕಾಸಿನ ಅವ್ಯವಹಾರವನ್ನು ಕೂಡಾ ನಡೆಸಿದ್ದಾನೆ" ಎಂದರು.
"ಯುವರಾಜ್ ಸ್ವಾಮಿಗೆ ಹಾಗೂ ಬಿಜೆಪಿಗೆ ಯಾವುದೇ ರೀತಿಯಾದ ಸಂಬಂಧವಿಲ್ಲ. ನನ್ನ ಬಳಿ ಬಂದು ವಿಶ್ ಮಾಡಿ ಹೋಗಿದ್ದಾನೆ" ಎಂದು ತಿಳಿಸಿದರು.
"ಸಿಸಿಬಿ ಪೊಲೀಸರು ಯುವರಾಜ್ ಸ್ವಾಮಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತ ಚಿತ್ರದುರ್ಗದ ಒಂದು ಮಠಕ್ಕೆ ಸ್ವಾಮಿ ಆಗಿದ್ದು, ಅಲ್ಲಿಂದ ಈತನನ್ನು ಹೊರಹಾಕಿದ್ದಾರೆ. ಅಲ್ಲಿಂದ ಬಂದ ಬಳಿಕ ಆತ ಬೆಂಗಳೂರಿನಲ್ಲಿ ನೆಲೆಸಿದ್ದು, ಆರ್ಎಸ್ಎಸ್ ಮುಖಂಡ ಎಂದು ಹೇಳಿ ಮೋಸ ಮಾಡಿದ್ದಾನೆ" ಎಂದು ಹೇಳಿದರು.
ಲೋಕಸಭೆ ಟಿಕೆಟ್ ವಿಚಾರವಾಗಿ ಬೆಳಗಾವಿಯ ರಾಜಕಾರಣಿಯೋರ್ವರು 10 ಲಕ್ಷ ಹಣ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರದ ಬಗ್ಗೆ ನನಗೆ ತಿಳಿದಿಲ್ಲ. ಅಲ್ಲದೇ, ಈ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳು ಕೂಡಾ ನನಗೆ ದೊರೆತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ದೊರೆತ ಬಳಿಕ ಪ್ರತಿಕ್ರಿಯಿಸುತ್ತೇನೆ" ಎಂದರು.