ನವದೆಹಲಿ, ಜ. 08 (DaijiworldNews/MB) : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆಗೆ ದೆಹಲಿ ಸಚಿವ ಸಂಪುಟ ಶುಕ್ರವಾರ ಅಸ್ತು ಎಂದಿದೆ.
ಇಂಡೊ-ಆರ್ಯನ್ ಭಾಷೆಯಾಗಿರುವ ಕೊಂಕಣಿಯನ್ನು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಅಧಿಕವಾಗಿ ಮಾತನಾಡುತ್ತಾರೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಪ್ರಸ್ತಾಪಿಸಿರುವ 22 ಭಾಷೆಗಳಲ್ಲಿ ಕೊಂಕಣಿಯೂ ಒಂದಾಗಿದೆ. ಇದು ಗೋವಾದ ಅಧಿಕೃತ ಭಾಷೆಯಾಗಿದೆ.
ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿರುವ ವಿಚಾರವಾಗಿ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ''ಕೊಂಕಣಿ ಮಾತನಾಡುವ ಎಲ್ಲ ಜನರಿಗೆ ಮತ್ತು ಕೊಂಕಣಿ ಭಾಷೆಯನ್ನು ಪ್ರೀತಿಸುವ ಎಲ್ಲರಿಗೂ ಅಭಿನಂದನೆಗಳು. ಕೊಂಕಣಿ ಭಾಷೆಯನ್ನು ಉತ್ತೇಜಿಸಲು ದೆಹಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪಿಸಲು ದೆಹಲಿ ಸಂಪುಟ ಇಂದು ಅನುಮೋದನೆ ನೀಡಿದೆ'' ಎಂದು ತಿಳಿಸಿದ್ದಾರೆ.