ತಿರುವನಂತಪುರ, ಜ.08 (DaijiworldNews/PY): ಕೇರಳ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಭಾಷಣ ಮಾಡುತ್ತಿದ್ದ ಸಂದರ್ಭ ವಿರೋಧ ಪಕ್ಷಗಳ ಸದಸ್ಯರು ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ನಂತರ ಸಭೆಯಿಂದ ಹೊರ ಹೋಗಿದ್ದಾರೆ.
ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರು ಡಾಲರ್ ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದು, ಅವರು ಶೀಘ್ರವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ಬಜೆಟ್ ಅಧಿವೇಶನದ ಸಂದರ್ಭ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರದ ಯೋಜನೆಯ ವಿಚಾರವಾಗಿ ರಾಜ್ಯಪಾಲರು ಭಾಷಣ ಮಾಡಲು ಪ್ರಾರಂಭಿಸಿದ ಸಂದರ್ಭ ಸಿಎಂ ಪಿಣರಾಯಿ ವಿಜಯನ್ ಹಾಗೂ ಸ್ಪೀಕರ್ ಅವರ ವಿರುದ್ದ ವಿಪಕ್ಷ ನಾಯಕರು ಘೋಷಣೆ ಕೂಗಲು ಆರಂಭಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯಪಾಲರು, "ನಾನು ನನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಈ ಸಂದರ್ಭ ಯಾರೂ ಕೂಡಾ ಅಡ್ಡಿ ಮಾಡಬಾರದು. ನೀವು ಈಗಾಗಲೇ ಹಲವಾರು ಬಾರಿ ಘೋಷಣೆಗಳನ್ನು ಕೂಗಿದ್ದೀರಿ. ನನ್ನನ್ನು ಪುನಃ ತಡೆಯಬೇಡಿ" ಎಂದಿದ್ದಾರೆ.
ಆದರೆ, ರಾಜ್ಯಪಾಲರ ಮಾತಿಗೆ ಕಿವಿಗೊಡದ ವಿಪಕ್ಷ ನಾಯಕರು ಸಭಾಂಗಣದಿಂದ ಹೊರಕ್ಕೆ ಹೋಗಿ ಪ್ರತಿಭಟನೆ ಮುಂದುವರೆಸಿದ್ದಾರೆ.