ಹರಪನಹಳ್ಳಿ, ಜ.08 (DaijiworldNews/PY): ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಅವರ ಒಡೆತನದ ಮದ್ಯ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದ ಘಟನೆ ದುಗ್ಗಾವತಿಯಲ್ಲಿ ನಡೆದಿದೆ.
ಮೃತರನ್ನು ರಘು ಎಂದು ಗುರುತಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಶಾಮನೂರು ಸಕ್ಕರೆ ಕಾರ್ಖಾನೆಯಲ್ಲಿರುವ ಜಾನ್ ಡಿಸ್ಟಿಲರೀಸ್, ಇಂಡಿಯನ್ ಕೇನ್ ಪವರ್ ಲಿಮಿಟೆಡ್, ಯೂನಿಟ್ ಸ್ಯಾಂಸನ್ ಡಿಸ್ಟಿಲರೀಸ್ ಘಟಕಗಳಲ್ಲಿ ಬೆಳಗ್ಗಿನ ಸಮಯ ಬೆಂಕಿ ಕಾಣಿಸಿಕೊಂಡಿದ್ದು, ಈ ಸಂದರ್ಭ ಕಾರ್ಖಾನೆಯ ಒಳಗಡೆ ಹಲವು ಮಂದಿ ಕೆಲಸ ಮಾಡುತ್ತಿದ್ದರು. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದ ವೇಳೆ ಗೋಡೆಗಳು ಕೂಡಾ ಕುಸಿದು ಬಿದ್ದಿವೆ.
ಈ ಬೆಂಕಿ ಅವಘಡವು ಆಲ್ಕೋಹಾಲ್ ಟ್ಯಾಂಕ್ ವೆಲ್ಡಿಂಗ್ ಮಾಡುವ ಸಂದರ್ಭ ಸಂಭವಿಸಿದೆ. ಹೆಚ್ಚಿನ ಪ್ರಮಾಣದ ಮದ್ಯದ ಬಾಟಲ್ಗಳನ್ನು ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿತ್ತು. ಬೆಂಕಿ ಅವಘಡದ ಪರಿಣಾಮ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕಾಗಿಮಿಸಿದ ಹರಪನಹಳ್ಳಿ, ಹರಿಹರ ಹಾಗೂ ದಾವಣಗೆರೆಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಚರಣೆ ಕೈಗೊಂಡಿದ್ದಾರೆ.
ತಹಶೀಲ್ದಾರ್ ಎಲ್.ಎಂ.ನಂದೀಶ್ ಸ್ಥಳಕ್ಕೇ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.