ಉತ್ತರ ಪ್ರದೇಶ, ಜ.08 (DaijiworldNews/PY): "ಉತ್ತರಪ್ರದೇಶದ ಬದಾಯುಂನಲ್ಲಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು" ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಬಂಧಿತ ಪ್ರಮುಖ ಆರೋಪಿಯನ್ನು ಪುರೋಹಿತ ಸತ್ಯ ನಾರಾಯಣ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ ಶರ್ಮಾ, "ಈತ ತನ್ನ ಸಹಚರರೋರ್ವನ ಮನೆಯಲ್ಲಿ ಬಚ್ಚಿಟ್ಟುಕ್ಕೊಂಡಿದ್ದು, ಈತನನ್ನು ಪತ್ತೆಹಚ್ಚಲು ಪೊಲೀಸರ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಚರಣೆ ನಡೆಸಿದ್ದರು" ಎಂದು ಹೇಳಿದ್ದಾರೆ.
"ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದಿದ್ದಾರೆ.
ಯುಪಿಯ ಬದಾಯುಂ ಜಿಲ್ಲೆಯಲ್ಲಿ 50 ವರ್ಷದ ಅಂಗನವಾಡಿ ಕಾರ್ಯಕರ್ತೆಯೋರ್ವರ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯಲಾಗಿದ್ದು, ರವಿವಾರ ಅವರ ಮೃತದೇಹ ಪತ್ತೆಯಾಗಿತ್ತು.