ನವೆದೆಹಲಿ, ಜ. 08 (DaijiworldNews/MB) : ''ಮೋದಿ ಸರ್ಕಾರ ತನ್ನ ಬಂಡವಾಳಶಾಹಿ ಸ್ನೇಹಿತರ ಅನುಕೂಲಕ್ಕಾಗಿ ದೇಶದ ಅನ್ನದಾತನಿಗೆ ದ್ರೋಹ ಬಗೆದಿದೆ'' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ದೆಹಲಿಯ ಹಲವು ಗಡಿಗಳಲ್ಲಿ ರೈತರು ಕಳೆದ 44 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸರ್ಕಾರ ಹಾಗೂ ರೈತ ಮುಖಂಡರ ನಡುವೆ 8ನೇ ಸುತ್ತಿನ ಮಾತುಕತೆ ನಡೆಯಲಿದೆ. ಈ ನಡುವೇ "ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ" ಎಂದು ಕೇಂದ್ರ ಹಾಗೂ ರೈತರ ನಡುವಿನ ಮಾತುಕತೆಗೂ ಮುನ್ನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ''ಮೋದಿ ಸರ್ಕಾರ ತನ್ನ ಬಂಡವಾಳಶಾಹಿ ಸ್ನೇಹಿತರ ಅನುಕೂಲಕ್ಕಾಗಿ ದೇಶದ ಅನ್ನದಾತನಿಗೆ ದ್ರೋಹ ಬಗೆದಿದೆ. ಚಳವಳಿಯ ಮೂಲಕ ರೈತರು ಮಾತನಾಡಿದ್ದಾರೆ. ಅನ್ನದಾತರ ಪರ ಧ್ವನಿ ಎತ್ತುವುದು ಮತ್ತು ಅವರ ಬೇಡಿಕೆಗಳನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ'' ಎಂದು ಹೇಳಿದ್ದಾರೆ.