ಚಿಕ್ಕಮಗಳೂರು, ಜ. 08 (DaijiworldNews/MB) : ಮೇಲ್ಜಾತಿಯ ಯುವಕರ ಗುಂಪೊಂದು ದಲಿತ ಮಹಿಳೆ ಮತ್ತು ಆಕೆಯ ಮಗನನ್ನು ಕ್ಷುಲ್ಲಕ ಕಾರಣಕ್ಕೆ ಅಮಾನುಷವಾಗಿ ಥಳಿಸಿದ ಘಟನೆ ಜಿಲ್ಲೆಯ ಹಾದಿ ಹಳ್ಳಿಯಲ್ಲಿ ವರದಿಯಾಗಿದೆ. ಈ ಬಗ್ಗೆ ಜನವರಿ 6 ರ ಬುಧವಾರ ರಾತ್ರಿ 7.30 ಕ್ಕೆ ದೂರು ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ದಲಿತ ಕುಟುಂಬದ ಒಡೆತನದ ಹಸು ತಾವು ಅಂಗಳದಲ್ಲಿ ಒಣಗಲು ಹಾಕಿದ್ದ ಮೆಕ್ಕೆಜೋಳದ ಮೇಲೆ ನಡೆದಿದೆ ಎಂಬ ಕಾರಣಕ್ಕೆ ಮೇಲ್ಜಾತಿಯ ಜನರು ದಲಿತ ಮಹಿಳೆ ಮತ್ತು ಆಕೆಯ ಮಗನಿಗೆ ಥಳಿಸಿದ್ದಾರೆ.
ಗಾಯಗೊಂಡ ಸಿದ್ದಮ್ಮ ಮತ್ತು ಪುತ್ರ ಪೂರ್ಣೇಶ್ ಅವರನ್ನು ಇಲ್ಲಿನ ಮಲ್ಲೆಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ಣೇಶ್ ತನ್ನ ಕುಟುಂಬದ ಮನೆಗೆ ಸೇರಿದ ಹಸುವನ್ನು ಮೇಯಿಸುತ್ತಿದ್ದ ವೇಳೆ ಹಸು ಇದ್ದಕ್ಕಿದಂತೆ ಹಾದಿ ಬದಲಾಯಿಸಿ ಒಣಗಿಸಲು ಹಾಕಿದ್ದ ಜೋಳದ ಮೇಲೆ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಯಿಂದ ಮೇಲ್ಜಾತಿಗೆ ಸೇರಿದ ಯುವಕರು ಕೋಪಗೊಂಡಿದ್ದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದು ಯುವಕನ ನಿವಾಸದ ಹಿಂದಿನ ಬಾಗಿಲನ್ನು ಸಹ ಮುರಿದಿದ್ದಾರೆ. ಯುವಕನ ಮನೆಗೆ ನುಗ್ಗಿ ತಾಯಿ-ಮಗನನ್ನು ಎಳೆದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯ ನಂತರ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಪ್ರಭು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸಮಾಜ ಕಲ್ಯಾಣ ಅಧಿಕಾರಿ ರೇವಣ್ಣ ಸ್ಥಳಕ್ಕೆ ಭೇಟಿ ನೀಡಿ ಇಬ್ಬರಿಂದ ವಿವರಗಳನ್ನು ಸಂಗ್ರಹಿಸಿದರು. ವಿನಯ್, ಭರತ್, ಪಾರ್ವತೇಗೌಡ ಮತ್ತು ಮಂಜೆ ಗೌಡನನ್ನು ಆರೋಪಿಗಳೆಂದು ಹೇಳಲಾಗಿದೆ.
ಈ ಮಧ್ಯೆ, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲು ಯೋಜಿಸಿದ್ದು, ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ದಲಿತ ಮುಖಂಡರು ಸ್ಥಳೀಯಾಡಳಿತವನ್ನು ಒತ್ತಾಯಿಸಿದ್ದಾರೆ. ಆರೋಪಿಗಳನ್ನು ಗ್ರಾಮದಿಂದ ಹೊರಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಆಗ್ರಹಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈವರೆಗೂ ಯಾರನ್ನೂ ಬಂಧಿಸಿಲ್ಲ. ಪ್ರಸ್ತುತ ಗ್ರಾಮದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಡಿವೈಎಸ್ಪಿ ಪ್ರಭು ತಿಳಿಸಿದ್ದಾರೆ.