ನವದೆಹಲಿ, ಜ.08 (DaijiworldNews/PY): "ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ" ಎಂದು ಕೇಂದ್ರ ಹಾಗೂ ರೈತರ ನಡುವಿನ ಮಾತುಕತೆಗೂ ಮುನ್ನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ರೈತರೊಂದಿಗೆ ಮಾತುಕತೆಯ ನೇತೃತ್ವ ವಹಿಸಿದ ಕೇಂದ್ರ ಸಚಿವ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ರಾಜ್ಯ ಖಾತೆ ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಅವರು, "ಜ.8ರಂದು ನಡೆಯಲಿರುವ ಪ್ರತಿಭಟನಾ ನಿರತ 40 ರೈತ ಸಂಘಟನೆಯ ಮುಖಂಡರೊಂದಿಗಿನ ಮಾತುಕತೆಯ ಫಲಿತಾಂಶವನ್ನು ಈಗಲೇ ಹೇಳುಲು ಆಗುವುದಿಲ್ಲ" ಎಂದಿದ್ದಾರೆ.
"ರೈತ ಸಂಘಟನೆಯ ಮುಖಂಡರೊಂದಿಗಿನ ಮಾತುಕತೆಯ ಫಲಿತಾಂಶವನ್ನು ಈ ಸಂದರ್ಭವೇ ಹೇಳಲು ಆಗದು. ಜ.8ರ ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಲಿರುವ ಸಭೆಯಲ್ಲಿ ಆಗಲಿರುವ ಚರ್ಚೆ ಹಾಗೂ ಅದರ ಆಧಾರದ ಮೇಲೆ ಎಲ್ಲಾ ತೀರ್ಮಾನವಾಗಲಿದೆ" ಎಂದಿದ್ದಾರೆ.
ರೈತರ ಪ್ರತಿಭಟನೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಪಂಜಾಬ್ನ ನಾನಾಸ್ಕರ್ ಗುರುದ್ವಾರ ಮುಖ್ಯಸ್ಥ ಬಾಬಾ ಲಾಖಾ ಅವರಲ್ಲಿ ಮನವಿ ಮಾಡುವ ಪ್ರಸ್ತಾಪದ ವಿಚಾರವಾಗಿ ಪ್ರತಿಕ್ರಿಯೆ ನೀಡಲು ತೋಮರ್ ನಿರಾಕರಿಸಿದ್ದಾರೆ.