ಮೋಹನ್ ಕುತ್ತಾರ್
ಮಂಗಳೂರು, ಜ. 08 (DaijiworldNews/MB) : ಭಾರತೀಯ ಜಲ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಲಕ್ಷದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಡಿ ಬೆಂಗಳೂರು ಜೈಲುಪಾಲಾದ ಇರಾನ್ ದೇಶದ 15 ಮೀನುಗಾರರ ವಿರುದ್ಧ ದಾಖಲಿಸಲಾದ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಆದೇಶದಂತೆ ರದ್ದುಪಡಿಸಲಾಗಿದೆ. ಒಂದು ವರ್ಷದ ಬಳಿಕ ಮೀನುಗಾರರ ಬಿಡುಗಡೆಯಾಗಲಿದ್ದು ಕರ್ನಾಟಕ ಹೈಕೋರ್ಟ್ ಮಾನವ ಧರ್ಮದ ಶ್ರೇಷ್ಠ ಗುಣ ಮಾನವೀಯತೆನ್ನು ಎತ್ತಿ ಹಿಡಿದ ತೀರ್ಪು ಇದಾಗಿದೆ ಅನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಮೀನುಗಾರರ ಪರ ವಕೀಲರಾದ ಕೇತನ್ ಬಂಗೇರ ಹಾಗು ಅಭಿಷೇಕ್ ಮಾರ್ಲ ವಾದ ಮಂಡಿಸಿದ್ದರು.
2019ರ , ಅ.21ರಂದು ಭಾರತೀಯ ಕೋಸ್ಟ್ ಗಾರ್ಡ್ ನೌಕೆಗಳು ಗಸ್ತು ತಿರುಗುತ್ತಿದ್ದಾಗ ಲಕ್ಷದ್ವೀಪದ ಬಳಿ ಭಾರತೀಯ ಜಲ ಗಡಿಯೊಳಗೆ ಎರಡು ದೋಣಿಗಳು ಪತ್ತೆಯಾಗಿದ್ದವು. ಅವುಗಳನ್ನು ನಿಲ್ಲಿಸುವಂತೆ ಸೂಚಿಸಿದಾಗ ದೋಣಿಗಳ ನಾವಿಕರು ನೌಕೆಗಳೊಂದಿಗೆ ಪರಾರಿಯಾಗಲು ಯತ್ನಿಸಿದ್ದರು ಎಂದು ಅರೋಪಿಸಿ ದೋಣಿಗಳು ಮತ್ತು ಮೀನುಗಾರರನ್ನು ವಶಕ್ಕೆ ಪಡೆಯಲಾಗಿತ್ತು. ಈ ಕುರಿತು ಅಂದಿನ ಕರಾವಳಿ ಕಾವಲು ಪಡೆಯ ಎಸ್ಪಿ ಆರ್.ಚೇತನ್ ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದರು.
''ಅವಿಧಿ'' ಮತ್ತು ''ಇಶಾನ್'' ಎಂಬ ಹೆಸರಿನ ಇರಾನ್ನ ದೋಣಿಗಳು ಅಕ್ರಮವಾಗಿ ಭಾರತದ ಜಲ ಗಡಿಯೊಳಕ್ಕೆ ಬಂದಿದ್ದವು. ಅಲ್ಲಿ ಮೀನುಗಾರಿಕೆ ನಡೆಸಲು ಅವರು ಯಾವುದೇ ರೀತಿಯ ಪರವಾನಗಿ ಹೊಂದಿರಲಿಲ್ಲ. ದಾಖಲೆಗಳನ್ನೂ ಹಾಜರುಪಡಿಸಿರಲಿಲ್ಲ. ನೌಕಾಪಡೆಯ ಅಧಿಕಾರಿಗಳು ವಿಚಾರಣೆ ನಡೆಸುವುದಕ್ಕೆ ಅಡ್ಡಿಪಡಿಸಿದ್ದರು. ಈ ಕಾರಣದಿಂದ ಅವರನ್ನು ವಶಕ್ಕೆ ಪಡೆದು, ಕರೆತರಲಾಗಿತ್ತು ಎಂದು ಮಾಹಿತಿ ನೀಡಿದ್ದರು.
ಕೋಸ್ಟ್ ಗಾರ್ಡ್ನ ಡೆಪ್ಯೂಟಿ ಕಮಾಂಡೆಂಟ್ ಹಾಗೂ ಬೋರ್ಡಿಂಗ್ ಅಧಿಕಾರಿ ಕುಲದೀಪ್ ಶರ್ಮಾ ನೀಡಿರುವ ದೂರಿನಂತೆ ಭಾರತೀಯ ಜಲಗಡಿ ಕಾಯ್ದೆಯ ಅಡಿಯಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಿ ಅಬೂಬಕರ್ ಅನ್ಸಾರಿ ಮೀಯಾ, ಮೂಸಾ ದೆಹದಾನಿ, ಅಜಂ ಅನ್ಸಾರಿ, ಶಿದ್ ಬಾಚೂ, ಅಬ್ದುಲ್ ಮಜೀದ್, ಮಜೀದ್ ರೆಹಮಾನ್ ದಾವೂದ್, ಮಹಮ್ಮದ್ ಇಸಾಕ್, ಕರೀಂ ಬಕ್ಸ್ ದೂರ್ಜಾದೆ, ಮಹಮ್ಮದ್ ಬಲೂಚ್, ಬಮನ್, ಅಬ್ದುಲ್ ಗನಿ ಬಾಪೂರ್, ನಸೀರ್ ಭದ್ರುಚ್, ಅನ್ವರ್ ಬಲೂಚ್, ನಭೀ ಬಕ್ಷ ಮತ್ತು ಯೂಸುಫ್ ಜಹಾನಿ ಎಂಬ ಮೀನುಗಾರರನ್ನು ಬಂಧಿಸಲಾಗಿತ್ತು. ಎಲ್ಲರನ್ನೂ ಇದೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಮಂಗಳೂರು ಜೈಲಿನಲ್ಲಿ, ನಂತರ ಕೊರೊನಾ ಸಂದರ್ಭದಲ್ಲಿ ಬೆಂಗಳೂರು ಜೈಲಿನಲ್ಲಿ ಇರಿಸಲಾಗಿತ್ತು.
ಇರಾನ್ ದೇಶದ ರಾಜತಾಂತ್ರಿಕರು ಅಥಾವ ಭಾರತೀಯ ರಾಜತಾಂತ್ರಿಕ ರು ಈ ಪ್ರಕರಣ ಬಗ್ಗೆ ಸತ್ಯ ಅಸಾತ್ಯತೆ ಬಗ್ಗೆ ರಾಜ್ಯ ಗೃಹ ಇಲಾಖೆಯ ಜೊತೆ ಯಾವೂದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಈ ಕಾರಣದಿಂದಾಗಿ ಒಂದುವರೆ ವರುಷ ಏನೂ ತಪ್ಪು ಮಾಡದ ಮೀನುಗಾರು ಪ್ರಾಕೃತಿಕ ವಿಕೋಪದಿಂದ ಜೈಲು ಸೇರುವಂತೆ ಆಗಿತ್ತು.
ಈ ಕಾನೂನು ಪ್ರಕ್ರಿಯೆ ನಡುವೆ ಕರಾವಳಿ ಪಡೆ ದಾಖಲಿಸಿದ ಎಫ್ಐಆರ್ ರದ್ದುಗೊಳಿಸುವಂತೆ ಮೀನುಗಾರರ ಪರ ವಕೀಲರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮೀನುಗಾರರ ಪರ ವಕೀಲರ ವಾದವನ್ನು ಆಲಿಸಿದ ಕರ್ನಾಟಕ ಹೈ ಕೋರ್ಟ್ ಮೀನುಗಾರಿಕಾ ಪ್ರಕ್ರಿಯೆಯಲ್ಲಿ ಕಾರಣಾಂತರಗಳಿಂದ ಹಾಗೂ ಪ್ರಕೃತಿ ವಿಕೋಪದಿಂದ ಮೀನುಗಾರಿಕಾ ದೋಣಿಯು ನಮ್ಮ ದೇಶದ ಜಲ ಗಡಿ ಪ್ರವೇಶಿಸಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮ್ಮೆ ಹೂಡುವುದು ಸರಿಯಲ್ಲ ಹಾಗು ಅಂತಾರಾಷ್ತ್ರೀಯ ಸಮುದ್ರದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಹಲವು ಬಾರಿ ನಮ್ಮ ದೇಶದ ಮೀನುಗಾರರು ಮತ್ತೊಂದು ದೇಶದ ಜಲ ಗಡಿಯನ್ನು ಪ್ರವೇಶಿಸಿದ್ದು, ಕೆಲವೊಮ್ಮೆ ಅಂತಹ ಮೀನುಗಾರರ ವಿರುದ್ಧ ಆ ದೇಶವು ಕ್ರಮ ಕೈಗೊಂಡಿದ್ದು, ಮತ್ತೆ ಕೆಲವೊಮ್ಮೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ದುರುದ್ದೇಶ ಇಲ್ಲದೆ ಮತ್ತೊಂದು ದೇಶದ ಜಲ ಗಡಿ ಪ್ರವೇಶಿಸಿದ್ದರೆ ಅಂತಹ ಮೀನುಗಾರರ ವಿರುದ್ಧ ಕ್ರಮಕೈಗೊಳ್ಳುವುದು ಸಮಂಜಸ ಅಲ್ಲ ಎಂದು ಅಭಿಪ್ರಾಯ ಪಟ್ಟಿತು. ಈ ಎಲ್ಲಾ ಕಾರಣದಿಂದ ಇರಾನ್ ದೇಶದ್ 15 ಮೀನುಗಾರ ವಿರುದ್ಧ ಇದ್ದ ಕ್ರಿಮಿನಲ್ ಮೊಕ್ಕದ್ದಮ್ಮೆಯನ್ನು ರದ್ದು ಪಡಿಸಿತು. ನ್ಯಾಯಲಯದ ತೀರ್ಪಿನಿಂದ ಇರಾನ್ ದೇಶದ ಪ್ರಜೆಗಳು ಮರಳಿ ಮಾತೃದೇಶಕ್ಕೆ ತೆರಳಿ ಕುಟುಂಬ ಸೇರುವ ದಾರಿ ಸುಗಮವಾಗಿದೆ.