ಚೆನ್ನೈ, ಜ.08 (DaijiworldNews/PY): "ದೇಶವಾಸಿಗಳಿಗೆ ಮುಂಬರುವ ಕೆಲವು ದಿನಗಳಲ್ಲಿ ಕೊರೊನಾ ಲಸಿಕೆಯನ್ನು ವಿತರಣೆ ಮಾಡಲು ಸಾಧ್ಯವಾಗಲಿದೆ" ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಶುಕ್ರವಾರದಂದು ಎರಡನೇ ಹಂತದ ಲಸಿಕೆ ವಿತರಣೆ ತಾಲೀಮು ನಡೆಯುತ್ತಿದ್ದು, ಈ ನಡುವೆ ಅವರು ತಮಿಳುನಾಡಿಗೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, "ಈ ಲಸಿಕೆಗಳನ್ನು ನಾವು ಮುಂದಿನ ದಿನಗಳಲ್ಲಿ ದೇಶವಾಸಿಗಳಿಗೆ ನೀಡಲು ಸಾಧ್ಯವಾಗುತ್ತದೆ. ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಮುಂಚೂಣಿಯ ಕೊರೊನಾ ವಾರಿಯರ್ಗಳಿಗೆ ಈ ಲಸಿಕೆಯನ್ನು ಮೊದಲು ನೀಡಲಾಗುವುದು. ಕೊರೊನಾ ಲಸಿಕೆಯನ್ನು ಕಡಿಮೆ ಅವಧಿಯಲ್ಲಿ ಅಭಿವೃದ್ದಿಪಡಿಸುವ ಮುಖೇನ ಭಾರತ ಉತ್ತಮ ಸಾಧನೆಗೈದಿದೆ" ಎಂದು ತಿಳಿಸಿದ್ದಾರೆ.
"ಕೊರೊನಾ ಲಸಿಕೆಯ ಹಂಚಿಕೆಯು ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಹಾಗೂ ಅವಶ್ಯಕವಾದ ಬೇಡಿಕೆದಾರರಿಗೆ ತಲುಪಲು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್ಜಿಒಗಳ ನೆರವಿಗಾಗಿ ವಿನಂತಿ ಮಾಡಲಾಗಿದೆ" ಎಂದಿದ್ದಾರೆ.