ಮುಂಬೈ, ಜ. 08 (DaijiworldNews/MB) : ''ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಹಿಂತಿರುಗುವ ಭಯ ಕೇಂದ್ರದಲ್ಲಿ ಅಧಿಕಾರದಲ್ಲಿರುವವರಿಗೆ ಉಂಟಾಗಿದೆ'' ಎಂದು ಶಿವಸೇನೆ ಹೇಳಿದೆ.
ಶಿವಸೇನಾ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿದೆ.
''ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷಗಾದಿಗೆ ಹಿಂತಿರುಗುವ ಭಯ ಕೇಂದ್ರದಲ್ಲಿ ಅಧಿಕಾರದಲ್ಲಿರುವವರಿಗೆ ಇದ್ದು, ಈ ಕಾರಣದಿಂದಾಗಿ ಗಾಂಧಿ ಕುಟುಂಬವನ್ನು ಅವಮಾನ ಮಾಡುವ ಅಭಿಯಾನ ಆರಂಭ ಮಾಡಿದ್ದಾರೆ'' ಎಂದು ಶಿವಸೇನೆ ದೂರಿದೆ.
''ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಾದಿಗೆ ವಾಪಾಸ್ ಬರಲಿದ್ದು ಇದು ಉತ್ತಮವಾದ ಬೆಳವಣಿಗೆಯಾಗಿದೆ'' ಎಂದು ಹೇಳಿರುವ ಶಿವಸೇನೆ, ''ಬಿಜೆಪಿಗೆ ಹೇಗೆ ಪ್ರಧಾನಿ ಮೋದಿ ಹೊರತುಪಡಿಸಿ ಬೇರೆ ಪರ್ಯಾಯವಿಲ್ಲವೋ ಅದೇ ರೀತಿ ಕಾಂಗ್ರೆಸ್ಗೂ ರಾಹುಲ್ ಗಾಂಧಿ ಹೊರತುಪಡಿಸಿ ಬೇರೆ ಪರ್ಯಾಯ ನಾಯಕತ್ವವಿಲ್ಲ'' ಎಂದು ಅಭಿಪ್ರಾಯಪಟ್ಟಿದೆ.
''ರಾಹುಲ್ ಗಾಂಧಿ ಅಧಿಕಾರದಲ್ಲಿ ಇಲ್ಲದ ವೇಳೆ ಕಾಂಗ್ರೆಸ್ ಪಕ್ಷ ತೀರಾ ದುರ್ಬಲವಾಗಿದ್ದು ಈಗ ಮತ್ತೆ ರಾಹುಲ್ ಅಧಿಕಾರಕ್ಕೆ ಮರಳುತ್ತಿದ್ದಾರೆ. ಅವರು ಅದಕ್ಕಾಗಿ ತಯಾರಾಗಿದ್ದಾರೆ. ಆದರೆ ಇದರಿಂದಾಗಿ ಆತಂಕಕ್ಕೆ ಒಳಗಾದ ಆಡಳಿತಾರೂಢ ಬಿಜೆಪಿಯು ರಾಹುಲ್ ಗಾಂಧಿಯವರನ್ನು ದುರ್ಬಲ ನಾಯಕನೆಂಬಂತೆ ಪ್ರತಿಬಿಂಬಿಸುತ್ತಿದೆ'' ಎಂದು ಆರೋಪಿಸಿದೆ.