ನವದೆಹಲಿ, ಜ. 08 (DaijiworldNews/MB) : ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ದೆಹಲಿಯ ಹಲವು ಗಡಿಗಳಲ್ಲಿ ರೈತರು ಕಳೆದ 44 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸರ್ಕಾರ ಹಾಗೂ ರೈತ ಮುಖಂಡರ ನಡುವೆ 8ನೇ ಸುತ್ತಿನ ಮಾತುಕತೆ ನಡೆಯಲಿದೆ.
ಸರ್ಕಾರ ಕಾಯ್ದೆಗಳನ್ನು ವಾಪಾಸ್ ಪಡೆಯುವುದಿಲ್ಲ ಎಂದು ಹೇಳುತ್ತಿದೆ. ಆದರೆ ಈ ಕಾಯ್ದೆಗಳು ರೈತ ವಿರೋಧಿ ಎಂದು ಪ್ರತಿಪಾದಿಸಿರುವ ರೈತರು ಈ ಕಾಯ್ದೆ ರದ್ದುಪಡಿಸುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.
ಸರ್ಕಾರದೊಂದಿಗೆ ಈವರೆಗೆ ನಡೆಸಿದ ಎಲ್ಲಾ ಮಾತುಕತೆಗಳು ವಿಫಲವಾಗಿದ್ದು ಇಂದು ಎಂಟನೇ ಹಂತದ ಮಾತುಕತೆ ನಡೆಯಲಿದೆ. ಸರ್ಕಾರ ರೈತರ ಮಣಿಯುತ್ತದೆಯೋ ಎಂದು ನಾವು ಕಾದು ನೋಡಬೇಕಿದೆ. ಇಂದು ದೆಹಲಿ ವಿಜ್ಞಾನಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ರೈತರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯಲಿದೆ.
ಈ ಹಿಂದೆ ಜನವರಿ 4ರಂದು ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿಯೂ ರೈತರು ಕಾಯ್ದೆ ರದ್ದತಿಗೆ ಆಗ್ರಹಿಸಿದ್ದು ಸರ್ಕಾರ ಕಾಯ್ದೆ ರದ್ದು ಮಾಡುವುದಿಲ್ಲ ಎಂದಿದೆ.
ಜನವರಿ 26ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಗಣರಾಜ್ಯೋತ್ಸವದಂದು ದೆಹಲಿಗೆ ನುಗ್ಗುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಅದಕ್ಕೆಂದು ರಾಜಧಾನಿಯ ಹೊರವಲಯದಲ್ಲಿ ಗುರುವಾರ ಟ್ರಾಕ್ಟರ್ ತಾಲೀಮು ಕೂಡ ಪ್ರಾರಂಭಿಸಿದ್ದಾರೆ.