ಬೆಂಗಳೂರು, ಜ.08 (DaijiworldNews/PY): "ಚಂಡಮಾರುತ ಹಾಗೂ ಮೇಲ್ಮೈ ಮಾರುತಗಳಿಂದಾಗಿ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ವ್ಯಾಪಕ ಮಳೆ, ತಂಪಾದ ಗಾಳಿ ಹಾಗೂ ಮಂಜು ಕಾಣಿಸಿಕೊಳ್ಳಲಿದೆ" ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಬಂಗಾಳ ಕೊಲ್ಲಿ ಹಾಗೂ ಅರಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮೋಡಗಳ ಚಲನೆ ಹೆಚ್ಚಿದ್ದು, ದಕ್ಷಿಣ ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗಲಿದೆ" ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ರಾಜ್ಯದ ದಕ್ಷಿಣ ಹಾಗೂ ಒಳನಾಡಿನ ಪ್ರದೇಶಗಲ್ಲಿ ರವಿವಾರದವರೆಗೆ ಉತ್ತಮ ಮಳೆಯಾಗಲಿದೆ.
"ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್ ಘೋಷಿಸಲಾಗಿದೆ" ಎಂದು ಪಾಟೀಲ್ ತಿಳಿಸಿದ್ದಾರೆ.
"ಮುಂದಿನ 2-3 ದಿನಗಳಲ್ಲಿ ಮೈಸೂರು ಪ್ರದೇಶದಾದ್ಯಂತ ಮಳೆ ಬೀಳಲಿದೆ" ಎಂದು ಪಾಟೀಲ್ ಹೇಳಿದ್ದಾರೆ.
ಈ ಋತುವಿನಲ್ಲಿ ಪೂರ್ವದಿಂದ ಬೀಸುವ ಗಾಳಿ ಪ್ರಬಲವಾಗಿದ್ದು, ಬಂಗಾಳಕೊಲ್ಲಿಯಿಂದ ಶ್ರೀಲಂಕಾ ಕಡೆಗೆ ಚಲಿಸುತ್ತಿದೆ. ನೈರುತ್ಯ ಮಾರುತದ ಸಮಯದಲ್ಲಿ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಆಗಸ್ಟ್ ಹಾಗೂ ಅಕ್ಟೋಬರ್ನಲ್ಲಿ ಪ್ರವಾಹ ಉಂಟಾಗಿತ್ತು.