ಬೆಂಗಳೂರು, ಜ. 08 (DaijiworldNews/MB) : ''ಕೇರಳದಲ್ಲಿ ಪಕ್ಷಿ ಜ್ವರ ದೃಢಪಟ್ಟ ಬಳಿಕ ಮಂಗಳೂರಿನಲ್ಲಿ ಪತ್ತೆಯಾದ ಆರು ಸತ್ತ ಕಾಗೆಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ'' ಎಂದು ಕರ್ನಾಟಕ ಆರೋಗ್ಯ ಸಚಿವ ಕೆ.ಸುಧಾಕರ್ ಗುರುವಾರ ಹೇಳಿದರು.
ರಾಷ್ಟ್ರವ್ಯಾಪಿ ಕೊರೊನಾ ವಾಕ್ಸಿನ್ ಡ್ರೈ ರನ್ ಚಾಲನೆಗೆ ಒಂದು ದಿನ ಮುನ್ನ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ರಾಜ್ಯಗಳು ಮತ್ತು ಕೇಂದ್ರ ಪ್ರದೇಶದ ಆರೋಗ್ಯ ಸಚಿವರೊಂದಿಗೆ ಗುರುವಾರ ಸಭೆ ನಡೆಸಿದರು. ''ಸಭೆಯಲ್ಲಿ ಭಾಗವಹಿಸಿದ ಬಳಿಕ, ಮಂಗಳೂರಿನಲ್ಲಿ ಆರು ಕಾಗೆಗಳು ಸಾವನ್ನಪ್ಪಿರುವ ಬಗ್ಗೆ ಹರ್ಷವರ್ಧನ್ ಅವರಿಗೆ ಮಾಹಿತಿ ನೀಡಿದ್ದೇನೆ'' ಎಂದು ಸುಧಾಕರ್ ಹೇಳಿದರು.
"ಮಂಗಳೂರಿನ ಮಂಜನಾಡಿ ಗ್ರಾಮದ ಅರಂಗಡಿ ಬಳಿ ಪತ್ತೆಯಾದ ಸತ್ತ ಕಾಗೆಗಳ ಪರೀಕ್ಷಾ ವರದಿಗಳಿಗಾಗಿ ನಾವು ಕಾಯುತ್ತಿದ್ದೇವೆ" ಎಂದು ಹೇಳಿದರು.
''ಪಕ್ಷಿ ಜ್ವರದಿಂದಾಗಿ ಕಾಗೆಗಳು ಸತ್ತಿರಬಹುದೆಂದು ಸ್ಥಳೀಯ ಜನರು ಆತಂಕದಲ್ಲಿದ್ದರೂ, ರಾಜ್ಯದಲ್ಲಿ ಜನರು ಈ ಘಟನೆಗಳಿಂದ ಚಿಂತಿಸಬೇಕಾಗಿಲ್ಲ. ಕರ್ನಾಟಕದಲ್ಲಿ ಇನ್ನೂ ಪಕ್ಷಿ ಜ್ವರ ಕಂಡು ಬಂದಿಲ್ಲ'' ಎಂದು ತಿಳಿಸಿದರು.
"ಈ ಬಾರಿಯೂ ಅದು ಅಷ್ಟು ಗಂಭೀರವಾಗಿರದೆ ಇರಬಹುದು. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಮಾಂಸವನ್ನು ಸೇವಿಸುವಾಗ ಅದನ್ನು ಸರಿಯಾಗಿ ಬೇಯಿಸಿ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಮಂಜನಾಡಿ ದಕ್ಷಿಣ ಕನ್ನಡದ ಮಂಗಳೂರು ವಿಶ್ವವಿದ್ಯಾಲಯದ ಸಮೀಪವಿರುವ ಒಂದು ದೊಡ್ಡ ಹಳ್ಳಿಯಾಗಿದ್ದು ಸುಮಾರು 1,695 ಮನೆಗಳಲ್ಲಿದ್ದು ಸುಮಾರು 11,000 ಜನಸಂಖ್ಯೆಯಿದೆ.
ಮಂಗಳೂರಿನ ವಿಶೇಷ ಆರ್ಥಿಕ ವಲಯದ ಭಾಗವಾಗಿರುವ ಈ ಗ್ರಾಮದಲ್ಲಿ ಇನ್ಫೋಸಿಸ್ ಕೂಡಾ ಇದೆ. ಇಲ್ಲಿ ಆಸ್ಪತ್ರೆಯನ್ನು ಒಳಗೊಂಡ ಎನ್ಐಟಿಟಿಇ ಮತ್ತು ಯೆನೆಪೋಯಾ ವೈದ್ಯಕೀಯ ಕಾಲೇಜಿದೆ.