ಬೆಂಗಳೂರು, ಜ. 08 (DaijiworldNews/MB) : ''ರಾಜ್ಯದ ಯಾವುದೇ ಪ್ರದೇಶ, ಯಾವುದೇ ಗ್ರಾಮದಲ್ಲಿ ಗೋಹತ್ಯೆ ಕಂಡರೆ ತಕ್ಷಣ 1962ಕ್ಕೆ ಕರೆ ಮಾಡಿ ದೂರು ನೀಡಿ. ಕೂಡಲೇ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ'' ಎಂದು ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.
''ಗೋಹತ್ಯೆ ನಿಷೇಧ ಕಾನೂನಿಗೆ ರಾಜ್ಯಪಾಲರ ಹಸ್ತಾಕ್ಷರ ದೊರೆತಿದೆ. ಇದಕ್ಕೆ ಕಾರಣೀಭೂತರಾದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಸಚಿವ ಸಂಪುಟದ ಎಲ್ಲ ಸಹೊದ್ಯೋಗಿಗಳಿಗೆ, ಪಕ್ಷದ ವರಿಷ್ಠರಿಗೆ, ರಾಜ್ಯದ ಎಲ್ಲ ಬಿಜೆಪಿ ಶಾಸಕರಿಗೆ, ಗೋ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಧನ್ಯವಾದ'' ಎಂದು ಚೌವ್ಹಾಣ್ ಹೇಳಿದರು.
''ಸಮಾಜದಲ್ಲಿ ಗೋವಿನ ಬಗ್ಗೆ ಇರುವ ಪ್ರೀತಿ, ಶ್ರದ್ಧೆ ಮತ್ತು ರಕ್ಷಣಾ ಮನೋಭಾವವು ದೇಸಿ ಗೋವುಗಳ ರಕ್ಷಣೆಗೆ ಸಹಕಾರಿಯಾಗುತ್ತದೆ. ಆರ್ಥಿಕವಾಗಿ ಸಬಲರು, ಆಸಕ್ತರು ಗೋ ಸಾಕಾಣಿಗೆ ಮಾಡಿದರೆ ಈ ಕಾರ್ಯಕ್ಕೆ ಮತ್ತಷ್ಟು ಬಲತುಂಬಿದ್ದಂತೆ'' ಎಂದರು.
ಇನ್ನು, ''ಈ ಕಾಯ್ದೆಯು ಬುಧವಾರದಿಂದ ಜಾರಿಗೆ ಬಂದಿದೆ. ರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಗೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಸಾಯಿಖಾನೆಗೆ ಒಯ್ಯುವಾಗ ರಕ್ಷಿಸಲಾದ ಗೋವುಗಳನ್ನು ಸಾಕಲು ಸಾರ್ವಜನಿಕರು ಮುಂದೆ ಬಂದರೆ ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಹಾಗೆಯೇ ಖಾಸಗಿ ಹಾಗೂ ಸರ್ಕಾರಿ ಮಟ್ಟದಲ್ಲಿ ಎಲ್ಲಾ ತಾಲೂಕುಗಳಲ್ಲೂ ಗೋಶಾಲೆಗಳನ್ನು ತೆರೆಯಲು ಚಿಂತನೆಗಳು ನಡೆಯುತ್ತಿವೆ'' ಎಂದು ಕೂಡಾ ತಿಳಿಸಿದ್ದಾರೆ.
''ಈ ಕಾಯ್ದೆಗೆ ಸಂಬಂಧಿಸಿದ ನಿಯಮ ರೂಪಿಸುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ'' ಎಂದು ಹೇಳಿದ್ದಾರೆ.