ಬೆಂಗಳೂರು, ಜ.07 (DaijiworldNews/PY): ಸಿಸಿಬಿ ಅಧಿಕಾರಿಗಳು ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಜ.8ರ ಶುಕ್ರವಾರದಂದು ಬೆಳಗ್ಗೆ 11 ಗಂಟೆಗೆ ವಿಚಾರಣೆ ಹಾಜರಾಗುವಂತೆ ತಿಳಿಸಿದ್ದಾರೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ರಾಧಿಕ ಕುಮಾರಸ್ವಾಮಿ ಅವರು, ರಾಜಕಾರಣಿಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ಯುವರಾಜ್ ಅವರಿಂದ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ ಸುಮಾರು 1.25 ಕೋಟಿ ರೂ ವರ್ಗಾವಣೆಯಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದರು.
"ಯುವರಾಜ್ ಅವರು ವೈಷ್ಣವಿ ಪ್ರೊಡಕ್ಷನ್ ಸಂಸ್ಥೆಯನ್ನು ಹೊಂದಿದ್ದಾರೆ. ಅವರು ನನ್ನ ಬಳಿ ಐತಿಹಾಸಿಕ ಸಿನಿಮಾ ಮಾಡುವ ವಿಚಾರವಾಗಿ ಚರ್ಚೆ ನಡೆಸಿದ್ದು, ನಾನೂ ಕೂಡಾ ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದೆ. ಅಲ್ಲದೇ, ಅವರು 15 ಲಕ್ಷ ರೂಗಳನ್ನು ಮುಂಗಡವಾಗಿ ನನ್ನ ಖಾತೆಗೆ ಜಮೆ ಮಾಡಿದ್ದರು. ಆದರೆ, ಸಿನಿಮಾ ವಿಚಾರವಾಗಿ ಅಗ್ರಿಮೆಂಟ್ ಆಗಿರಲಿಲ್ಲ. ಈ ವಿಚಾರಕ್ಕೆ ಹಾಗೂ ನನ್ನ ಸಹೋದರ ರವಿರಾಜ್ಗೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದ್ದರು.
"ಯುವರಾಜ್ ಅವರು ಜ್ಯೋತಿಷಿಯಾಗಿದ್ದು, ನಮ್ಮ ಕುಟುಂಬದ ವಿಚಾರಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಹಲವು ಬಾರಿ ಅವರು ಹೇಳಿದ ರೀತಿ ನಮ್ಮ ಜೀವನದಲ್ಲಿ ನಡೆದ ಘಟನೆಗಳೂ ಇವೆ. ಅಲ್ಲದೇ, ಅವರು ನಮ್ಮ ತಂದೆಯ ಸಾವಿನ ಸೂಚನೆಯನ್ನು ಕೂಡಾ ನೀಡಿದ್ದರು. ನನಗೆ ಡಿಸೆಂಬರ್ ತಿಂಗಳಿನಲ್ಲಿ ಸಮಯ ಸೂಕ್ತವಾಗಿರುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರಿಂದ ಇಂತಹ ಸಮಸ್ಯೆ ಆಗುತ್ತದೆ ಎಂದು ನಾವು ಭಾವಿಸಿಯೇ ಇರಲಿಲ್ಲ" ಎಂದಿದ್ದಾರೆ.
"ಸಿಸಿಬಿ ಪೊಲೀಸರು ನನ್ನ ಸಹೋದರ ರವಿರಾಜ್ ಅವರನ್ನು ವಿಚಾರಣೆ ನಡೆಸಿದ್ದು, ನನ್ನನ್ನೂ ಕರೆದರೆ ನಾನೂ ಕೂಡಾ ವಿಚಾರಣೆಗೆ ಹಾಜರಾಗಲು ಸಿದ್ದ" ಎಂದು ತಿಳಿಸಿದ್ದರು.