ಚೆನ್ನೈ, ಜ.07 (DaijiworldNews/PY): "ಜೀವಿಸುವ ಹಕ್ಕಿಗಿಂತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ದೊಡ್ಡದಲ್ಲ" ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಕೊರೊನಾ ಮಾರ್ಗಸೂಚಿಗಳಲ್ಲಿ ರಾಜಿ ಮಾಡಿಕೊಳ್ಳದೇ ತಮಿಳುನಾಡಿನ ದೇವಾಲಯವೊಂದರಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುವ ವಿಚಾರದ ಬಗ್ಗೆ ಸಾಧ್ಯತೆಗಳನ್ನು ಪರಿಶೀಲನೆ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಅವರು ಇದಕ್ಕೆ ಸಂಬಂಧಿಸಿದಂತೆ ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಾದವನ್ನು ಆಲಿಸಿದ್ದು, "ಜೀವಿಸುವ ಹಕ್ಕಿಗಿಂತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ದೊಡ್ಡದಲ್ಲ. ಸರ್ಕಾರವು ಕೊರೊನಾದ ಪರಿಸ್ಥಿತಿಯಲ್ಲಿ ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವಂತೆ ಇಲ್ಲ" ಎಂದಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ, ನ್ಯಾಯಮೂರ್ತಿಗಳಾದ ಸೆಂಥಿಲ್ ಕುಮಾರ್ ಹಾಗೂ ರಾಮಮೂರ್ತಿ ಅವರಿದ್ಧ ತ್ರಿಸದಸ್ಯ ಪೀಠವು ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಕೊರೊನಾ ಮಾರ್ಗಸೂಚಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ರೀತಿಯಾದ ರಾಜಿ ಮಾಡಿಕೊಳ್ಳದೇ, ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯದಲ್ಲಿ ಉತ್ಸವ ಹಾಗೂ ಆಚರಣೆಗಳನ್ನು ನಡೆಸುವ ಸಾಧ್ಯತೆಯನ್ನು ಪರಿಶೀಲನೆ ಮಾಡುವಂತೆ ತಿಳಿಸಿದೆ.