ಬೆಂಗಳೂರು, ಜ.07 (DaijiworldNews/PY): "ರಾಜ್ಯದ 263 ಕಡೆಗಳಲ್ಲಿ ಲಸಿಕೆ ವಿತರಣೆಯ ಡ್ರೈ ರನ್ ನಡೆಯಲಿದ್ದು, ಲಸಿಕೆ ಬಂದ ನಂತರ ಜನಾಂದೋಲನದಂತೆ ವಿತರಣೆಯ ಕಾರ್ಯ ನಡೆಯಬೇಕಿದೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಾಳೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿರುವ ಕೊರೊನಾ ಲಸಿಕೆ ವಿತರಣೆಯ ತಾಲೀಮು ಕುರಿತಂತೆ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವಧನ್ ಅವರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಭೆಯಲ್ಲಿ ಕೊರೊನಾ ಲಸಿಕೆಯ ವಿತರಣೆಗೆ ಸಿದ್ದತೆ, ಕೇಂದ್ರ ಸರ್ಕಾರದಿಂದ ಬೇಕಾಗಿರುವ ನೆರವಿನ ಬಗ್ಗೆ ಚರ್ಚೆ ನಡೆದಿದೆ. ಪ್ರತೀ ಜಿಲ್ಲೆಯಲ್ಲಿ ಜ.8ರಂದು ಕನಿಷ್ಠ ಮೂರು ಕಡೆ ಲಸಿಕೆ ವಿತರಣೆಯ ತಾಲೀಮು ನಡೆಯಬೇಕಿತ್ತು, ಆದರೆ, ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಏಳು ವ್ಯವಸ್ಥೆಯಲ್ಲಿ ತಯಾರಿ ಮಾಡಿಕೊಂಡು 263 ಪ್ರದೇಶಗಳಲ್ಲಿ ಲಸಿಕೆಯ ವಿತರಣೆ ನಡೆಯಲಿದೆ. 24 ಜಿಲ್ಲಾಸ್ಪತ್ರೆ ಸೇರಿದಂತೆ 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆಯಲಿದೆ" ಎಂದು ತಿಳಿಸಿದರು.
"ಲಕ್ಷ ಸಿರಿಂಜುಗಳನ್ನು ಕೇಂದ್ರ ಸರ್ಕಾರವು ಕಳುಹಿಸಿ ಕೊಟ್ಟಿದೆ. ಈ ಸಿರಿಂಜ್ಗಳನ್ನು ಎಲ್ಲಾ ಜಿಲ್ಲೆಗಳಿಗೆ ನೀಡಲಾಗಿದೆ. 4 ವಾಕ್ -ಇನ್ ಫ್ರೀಜರ್, 10 ವಾಕ್ - ಇನ್ ಕೂಲರ್, 46,591 ಲಸಿಕೆ ಕ್ಯಾರಿಯರ್, 3039 ಡೀಪ್ ಫ್ರೀಜರ್, 3,201 ಐಎಲ್ ಆರ್, 2,25,749 ಐಸ್ ಪ್ಯಾಕ್ ಹಾಗೂ 3,312 ಕೋಲ್ಡ್ ಬಾಕ್ಸ್ ರಾಜ್ಯದಲ್ಲಿ ಇವೆ" ಎಂದರು.
"225 ಲೀಟರ್ ಸಾಮರ್ಥ್ಯದ 64 ಐಎಲ್ ಆರ್ಗಳನ್ನು ಕೇಂದ್ರವು ಕಳುಹಿಸಿಕೊಟ್ಟಿದೆ. ಅಲ್ಲದೇ, 1 ವಾಕ್ - ಇನ್ ಫ್ರೀಜರ್ ಹಾಗೂ 2 ವಾಕ್ - ಇನ್ ಕೂಲರ್ ಕಳುಹಿಸಿಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ" ಎಂದು ಹೇಳಿದರು.
"ನಾನಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು 1 ಕೋಟಿ ಲಸಿಕೆಗಳನ್ನು ನೀಡಲಿದೆ. ಮೊದಲು ಲಸಿಕೆ ಆರೋಗ್ಯ ಸಿಬ್ಬಂದಿ, ಪೊಲೀಸರು, ರಕ್ಷಣಾ ಸಿಬ್ಬಂದಿ, ಕೊರೊನಾ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಿಗಲಿದೆ. ಕೊರೊನಾ ಲಸಿಕೆಯಿಂದ ಯಾವುದೇ ರೀತಿಯಾದ ಅಪಾಯವಿಲ್ಲ. ಜನರಿಗೆ ಇದರಿಂದ ಅನುಕೂಲವಾಗಲಿದೆ" ಎಂದರು.
ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ದ.ಕ.ದಲ್ಲಿ ಆರು ಕಾಗೆಗಳು ಮೃತಪಟ್ಟಿದ್ದು, ಪರೀಕ್ಷೆ ಕಳುಹಿಸಲಾಗಿದೆ. ಹಕ್ಕಿಜ್ವರ ಬಾರದಂತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ" ಎಂದು ತಿಳಿಸಿದರು.
"ಲಕ್ಷಾಂತರ ಮಕ್ಕಳು ಶಾಲೆಗೆ ಹೋಗುತ್ತಿರುವ ವೇಳೆ ಕೊರೊನಾದ ವಿಚಾರವಾಗಿ ಸುಮ್ಮನೆ ಆತಂಕ ಮೂಡಿಸಬಾರದು. ಈ ಬಗ್ಗೆ ಸರ್ಕಾರ ಎಲ್ಲಾ ರೀತಿಯಾದ ಮುಂಜಾಗ್ರತ ಕ್ರಮ ಕೈಗೊಂಡಿದೆ" ಎಂದರು.