ಹೈದರಾಬಾದ್, ಜ.07 (DaijiworldNews/PY): "ಆಂಧ್ರ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗಳನ್ನು ಪ್ರೋತ್ಸಾಹಿಸುತ್ತಾರೆ" ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಮಂಗಳಗಿರಿಯಲ್ಲಿ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು, "ಸಂವಿಧಾನದ ನಿಯಮಗಳನ್ನು ಉಲ್ಲಂಘನೆ ಮಾಡಿ ಕ್ರೈಸ್ತ ಪ್ಯಾಸ್ಟರ್ಗಳಿಗೆ ಮಾಸಿಕ ರೂ.5000 ಸಂಭಾವನೆ ಕೊಡಲಾಗುತ್ತಿದೆ. ಚರ್ಚ್ಗಳು ಮತ ಬ್ಯಾಂಕ್ ರಾಜಕಾರಣದ ಕೇಂದ್ರ ಬಿಂದುಗಳಾಗಿವೆ" ಎಂದಿದ್ದಾರೆ.
"ಪೊಲೀಸ್ ಠಾಣೆಯಲ್ಲಿ ಕ್ರಿಸ್ಮಸ್ ಆಚರಣೆ ನಡೆಯುತ್ತಿವೆ. ವೆಂಕಟೇಶ್ವರನ ಸನ್ನಿಧಿಯಲ್ಲಿ ಉಪಮುಖ್ಯಮಂತ್ರಿಯೋರ್ವರು ಕ್ರಿಸ್ಮಸ್ ಶುಭಾಶಯ ಹೇಳಿದ್ದಾರೆ. ಧಾರ್ಮಿಕ ಭಾವನೆಗಳು ಕೇವಲ ಕ್ರೈಸ್ತರಿಗೆ ಮಾತ್ರ ಇವೆಯೇ? ಹಿಂದೂ ಹಾಗೂ ಮುಸ್ಲಿಮರಿಗೆ ಧಾರ್ಮಿಕ ಭಾವನೆಗಳು ಇಲ್ಲವೆ?" ಎಂದು ಕೇಳಿದ್ದಾರೆ.
ರಾಜ್ಯದಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಹಾನಿಯಾದ ಹಲವು ಘಟನೆಗಳು ವರದಿಯಾದ ಹಿನ್ನೆಲೆ ಚಂದ್ರಬಾಬು ನಾಯ್ಡು ಅವರು ಈ ಹೇಳಿಕೆ ನೀಡಿದ್ದಾರೆ.