ಹುಬ್ಬಳ್ಳಿ ಜ.07 (DaijiworldNews/PY): "ನಾನು ಸಭಾಪತಿಯಾಗುವುದಕ್ಕೆ ಮೂರು ಪಕ್ಷಗಳಲ್ಲಿಯೂ ಕೂಡಾ ಸಹಮತವಿದೆ" ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೂರು ಪಕ್ಷಗಳಲ್ಲಿಯೂ ಕೂಡಾ ನಾನು ಸಭಾಪತಿಯಾವುದಕ್ಕೆ ಸಹಮತವಿದೆ. ಇದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೂ ಕೂಡಾ ಒಪ್ಪಿದ್ದಾರೆ. ಸಭಾಪತಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲು ಅನೇಕ ಮಂದಿ ಒಲವು ತೋರಿದ್ದಾರೆ" ಎಂದರು.
"ಪರಿಷತ್ನಲ್ಲಿ ನಮ್ಮ ಪಕ್ಷವನ್ನು ಹೊರಗಿಟ್ಟು ಯಾರೂ ಕೂಡಾ ಅಧಿಕಾರ ಹಿಡಿಯಲಾಗದು. ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಸೂಕ್ಷ್ಮ ವ್ಯಕ್ತಿತ್ವದವರು ಎನ್ನುವುದು ನನಗೆ ತಿಳಿದಿದೆ" ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ವಿಲೀನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಅಥವಾ ಮೈತ್ರಿ ಯಾವುದು ಇಲ್ಲ. ಸಭಾಪತಿ ಸ್ಥಾನಕ್ಕೆ ಹಾಗೂ ಪರಿಷತ್ಗೆ ಮಾತ್ರವೇ ನಮ್ಮ ಬೆಂಬಲ" ಎಂದು ತಿಳಿಸಿದರು.