ಹುಬ್ಬಳ್ಳಿ ಜ.07 (DaijiworldNews/PY): "ಸಿಎಂ ಬದಲಾವಣೆ ಖಚಿತ ಎಂದು ಹೇಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾವಾಗ ಜ್ಯೋತಿಷಿಯಾಗಿದ್ದು?" ಎಂದು ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ ಕೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಇನ್ನೂ ಎರಡೂವರೆ ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಈ ವಿಚಾರದ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ಕೂಡಾ ಅನುಮಾನ ಬೇಡ" ಎಂದು ಹೇಳಿದರು.
"ಸಿಎಂ ಬಿಎಸ್.ಯಡಿಯೂರಪ್ಪ ಅವರು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ನಾಯಕತ್ವ ಬದಲಾವಣೆ ಎನ್ನುವ ವಿಚಾರ ಕಾಂಗ್ರೆಸ್ಸಿಗರ ಕನಸು" ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಚಿವ ಸಂಪುಟ ವಿಸ್ತರಣೆ ಸಿಎಂ ಅವರ ಪರಮಾಧಿಕಾರವಾಗಿದೆ. ಈ ಬಗ್ಗೆ ಸಿಎಂ ಅವರು ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿಗೆ ಸೇರ್ಪಡೆಯಾದ ಎಲ್ಲರಿಗೂ ಕೂಡಾ ಸಚಿವ ಸ್ಥಾನ ಸಿಗಲಿದೆ" ಎಂದರು.
"ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾದ ನಾವು ಎಂದಿಗೂ ಕೂಡಾ ಕಾಂಗ್ರೆಸ್ಗೆ ಮರಳುವ ಪ್ರಶ್ನೆಯೇ ಇಲ್ಲ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭ್ರಮೆ" ಎಂದು ಹೇಳಿದರು.
"ಬಸವರಾಜ ಹೊರಟ್ಟಿ ಅವರು ಉತ್ತಮ ಗೆಳೆಯರು. ಅವರು ಸಭಾಪತಿಯಾಗುವುದಕ್ಕೆ ಸದಾ ನಮ್ಮ ಬೆಂಬಲವಿದೆ" ಎಂದು ತಿಳಿಸಿದರು.