ಚಾಮರಾಜನಗರ, ಜ. 07 (DaijiworldNews/MB) : ''ರಾಜ್ಯದಲ್ಲಿಇನ್ನೂ ಎರಡೂವರೆ ವರ್ಷ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ, ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ'' ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲವೆಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬುದು ಸತ್ಯವಲ್ಲ'' ಎಂದು ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ, ಹೈಕಮಾಂಡ್ ಸೂಚಿಸಿದರೆ ನೀವು ಮುಖ್ಯಮಂತ್ರಿಯಾಗುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಮುಖ್ಯಮಂತ್ರಿ ಬದಲಾವಣೆ ಇಲ್ಲವೆಂದು ಅರುಣ್ ಸಿಂಗ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹಾಗಿರುವಾಗ ನಾನು ಮುಖ್ಯಮಂತ್ರಿಯಾಗುವ ವಿಚಾರವೇ ಬರುವುದಿಲ್ಲ'' ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮಾಧ್ಯಮದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ''ನನಗೆ ಚಾಮರಾಜನಗರಕ್ಕೆ ಬರಲು ಯಾವುದೇ ಭಯವಿಲ್ಲ. ಸ್ಪೀಕರ್ ಆಗಿದ್ದಾಗ, ಮುಖ್ಯಮಂತ್ರಿ ಆಗಿದ್ದಾಗ ನಾನು ಇಲ್ಲಿಗೆ ಬಂದಿದ್ದೇನೆ. ಈಗ ಕೈಗಾರಿಕಾ ಸಚಿವನಾಗಿಯೂ ಬಂದಿದ್ದೇನೆ'' ಎಂದು ಉತ್ತರಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ರೇಣುಕಾಚಾರ್ಯ ಮಧ್ಯೆ ನಡೆಯುತ್ತಿರುವ ವಾಕ್ಸಮರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಜಗದೀಶ ಶೆಟ್ಟರ್ ಅವರು, ''ನನಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿಚಾರವನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಸರಿಪಡಿಸುತ್ತಾರೆ'' ಎಂದರು.