ಬೆಂಗಳೂರು, ಜ.07 (DaijiworldNews/PY): "ಯಡಿಯೂರಪ್ಪ ಸರ್ಕಾರದ ಬಗ್ಗೆ ಚರ್ಚೆ ಮಾಡುವುದು ಅನಗತ್ಯ. ನನಗೆ ನಮ್ಮ ಪಕ್ಷ ಕಟ್ಟುವುದು ಮಾತ್ರವೇ ಮುಖ್ಯ. 2023ರಲ್ಲಿ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು" ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದರು.
ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, "ನಮ್ಮ ಸರ್ಕಾರ ಬಿದ್ದ ಬಳಿಕ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಬೀಳಿಸುತ್ತೇನೆ ಎಂದಿಲ್ಲ. ಯಡಿಯೂರಪ್ಪ ಸರ್ಕಾರದ ಬಗ್ಗೆ ಚರ್ಚೆ ಮಾಡುವುದು ಅನಗತ್ಯ. ಆ ವಿಚಾರದ ಬಗ್ಗೆ ಮಾತನಾಡಲು ಹಲವು ಮಂದಿ ಇದ್ದಾರೆ. ನನಗೆ ನಮ್ಮ ಪಕ್ಷ ಕಟ್ಟುವುದು ಮಾತ್ರವೇ ಮುಖ್ಯ. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಮುಖ್ಯವಾಗಿರುವ ಕಾರಣ ಅದರತ್ತ ಗಮನ ಹರಿಸೋಣ" ಎಂದರು.
"ನಾವು ಗ್ರಾ.ಪಂ.ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ, ನಾವು ಕಾಂಗ್ರೆಸ್ನ ಸಮೀಪದಲ್ಲಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಎರಡು, ಮೂರು ಸಾವಿರ ಅಂತರ ಇರಬಹುದು" ಎಂದು ಹೇಳಿದರು.
"ಎಲ್ಲಾ ಜಿಲ್ಲೆಗಳಲ್ಲೂ ಕೂಡಾ ನಮ್ಮ ಕಾರ್ಯಕರ್ತರಿದ್ದಾರೆ. ನಾವು ಕೆಲವೊಂದು ಕಡೆ ಮೂರನೇ ಸ್ಥಾನದಲ್ಲಿ ಇರಬಹುದು. ಆದರೂ ಕೂಡಾ ನಾವು ಹಾಸನ, ಮೈಸೂರು, ಮಂಡ್ಯ ಹಾಗೂ ಕೆಲವು ಕಡೆ ಮೊದಲ ಸ್ಥಾನದಲ್ಲಿದ್ದೇವೆ" ಎಂದು ತಿಳಿಸಿದರು.