ನವದೆಹಲಿ, ಜ. 07 (DaijiworldNews/MB) : ''ಕೊರೊನಾದ ಮಧ್ಯೆ ಈ ವರ್ಷದ ಆರಂಭದಲ್ಲಿ ನಡೆದ ನಿಜಾಮುದ್ದೀನ್ ಮಾರ್ಕಾಜ್ ಸಭೆಯಿಂದ ಏನನ್ನು ಕಲಿತಿದ್ದೀರಿ'' ಎಂದು ಕೇಂದ್ರವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ''ಕೊರೊನಾ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ, ರೈತರ ಪ್ರತಿಭಟನೆಯಲ್ಲೂ ಇದೇ ಪರಿಸ್ಥಿತಿ ಉದ್ಭವಿಸಬಹುದು'' ಎಂದು ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕಳೆದ 42 ದಿನಗಳಿಂದ ದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠವು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಲ್ಲಿ, "ಏನಾಗುತ್ತಿದೆ ಎಂದು ನೀವು ನಮಗೆ ತಿಳಿಸಬೇಕು" ಎಂದು ಕೇಳಿದ್ದಾರೆ.
''ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೊರೊನಾ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆಯೇ'' ಎಂದು ನ್ಯಾಯಮೂರ್ತಿಗಳಾದ ಎ.ಎಸ್ ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಪ್ರಶ್ನಿಸಿದರು.
ಸಾಲಿಸಿಟರ್ ಜನರಲ್ ಸರಿಯಾದ ಉತ್ತರ ನೀಡದ ಸಂದರ್ಭ ಉನ್ನತ ನ್ಯಾಯಾಲಯವು, ''ರೈತರ ಪ್ರತಿಭಟನೆಯು ರಾಷ್ಟ್ರ ರಾಜಧಾನಿಯಲ್ಲಿನ ನಿಜಾಮುದ್ದೀನ್ ಮಾರ್ಕಾಜ್ ಸಭೆಯಂತಹ ಪರಿಸ್ಥಿತಿಯಾಗಬಹುದು'' ಎಂದು ಎಚ್ಚರಿಸಿದೆ.
ಕೊರೊನಾ ಹರಡುವುದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಉನ್ನತ ನ್ಯಾಯಾಲಯವು ಕೇಂದ್ರಕ್ಕೆ ತಿಳಿಸಿದೆ. ಭಾರೀ ಪ್ರಮಾಣದ ಜನರು ಸೇರುವ ಸಂದರ್ಭ ಕೊರೊನಾ ವಿರುದ್ದ ಮುನ್ನೆಚ್ಚರಿಕೆ ವಹಿಸದಿದ್ದರೆ ಆತಂಕಕಾರಿ ವಿಚಾರ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
''ಕೊರೊನಾ ಹರಡದಂತೆ ನೋಡಿಕೊಳ್ಳಲು ಕೋರ್ಟ್ ಪ್ರಯತ್ನಿಸುತ್ತಿದೆ'' ಎಂದು ಹೇಳಿದ ನ್ಯಾಯಪೀಠವು, ''ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ಎಂದು ಖಾತರಿ ಪಡಿಸಿಕೊಳ್ಳಿ'' ಎಂದು ತಿಳಿಸಿದೆ.