ನವದೆಹಲಿ, ಜ.07 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು, ನ್ಯೂ ಅಟೇಲಿ-ನ್ಯೂ ಕಿಶನ್ ಘರ್ ಮಧ್ಯೆ ಸಾಗುವ ಜಗತ್ತಿನ ಮೊದಲ ವಿದ್ಯುತ್ ಚಾಲಿತ ಡಬಲ್ ಸ್ಟ್ಯಾಕ್ 1.5-ಕಿ.ಮೀ ಉದ್ದದ ಕಂಟೇನರ್ ರೈಲಿಗೆ ಚಾಲನೆ ನೀಡಿದರು.
ಅಲ್ಲದೇ, ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ನ 306 ಕಿ.ಮೀ ರೇವಾರಿ-ಮದಾರ್ ವಿಭಾಗವನ್ನು ಕೂಡಾ ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, "ಇದು ದೇಶದ ವಿವಿಧ ಭಾಗಗಳಲ್ಲಿ ನೂತನ ಅಭಿವೃದ್ದಿ ಕೇಂದ್ರಗಳ ರಚನೆಗೆ ನೆರವಾಗಲಿವೆ. ಅಲ್ಲದೇ, ದೇಶದ ಪಾಲಿಗೆ ಪೂರ್ವ-ಪಶ್ಚಿಮ ರಿಸರ್ವ್ ಸರಕು ಕಾರಿಡಾರ್ಗಳು ಅಭಿವೃದ್ದಿಯ ದಿಕ್ಕನ್ನು ಬದಲಾಯಿಸಲಿವೆ" ಎಂದರು.
"ಜಪಾನ್ ನಮಗೆ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ನಿರ್ಮಾಣ ಸಂದರ್ಭ ಆರ್ಥಿಕ ಹಾಗೂ ತಾಂತ್ರಿಕವಾದ ನೆರವು ಒದಗಿಸಿದೆ. ಈ ಹಿನ್ನೆಲೆ ಜಪಾನ್ ಹಾಗೂ ಅಲ್ಲಿನ ಜನತೆಗೆ ನಾನು ಧನ್ಯವಾದ ತಿಳಿಸುತ್ತೇನೆ" ಎಂದು ಹೇಳದಿರು.
ಈ ವೇಳೆ ಕೊರೊನಾ ಲಸಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಭಾರತದಲ್ಲಿ ತಯಾರಾದ ಎರಡು ಕೊರೊನಾ ಲಸಿಕೆಗಳು ದೇಶದ ಜನರಲ್ಲಿ ಹೊಸತಾದ ವಿಶ್ವಾಸ ಮೂಡಿಸಿವೆ" ಎಂದು ತಿಳಿಸಿದರು.