ಬೆಂಗಳೂರು, ಜ. 07 (DaijiworldNews/MB) : ''ರಾಷ್ಟ್ರ ಮಟ್ಟದಲ್ಲಿ ಜನತಾ ಪರಿವಾರ ಒಗ್ಗೂಡಿಸುವ ಸಲುವಾಗಿ ಎಲ್ಲ ನಾಯಕರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದೇನೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಲಿದ್ದೇನೆ'' ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ರಾಜ್ಯಕ್ಕೆ, ದೇಶಕ್ಕೆ ಏನಾದರೂ ಆಗಬೇಕು ಎಂಬ ಉದ್ದೇಶದಿಂದ ನಾನು ಜೆಡಿಎಸ್ ಸೇರುತ್ತಿದ್ದೇನೆಯೇ ಹೊರತು ನಾನು ಏನೋ ಆಗಬೇಕೆಂಬ ಉದ್ದೇಶದಿಂದ ಅಲ್ಲ'' ಎಂದು ಹೇಳಿದರು.
''ನಾನು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರುತ್ತಿದ್ದೇನೆ ಎಂಬ ಭಯ ನನಗೆ ಏನೂ ಇಲ್ಲ. ನಾನು ಮನಸ್ಸು ಮಾಡಿದರೆ, ಯಾವತ್ತೋ ಮುಸ್ಲಿಂ ನಾಯಕನಾಗುತ್ತಿದ್ದೆ. ಆದರೆ ನನಗೆ ಅಂತಹ ಆಸೆಗಳು ಇಲ್ಲ'' ಎಂದು ಕೂಡಾ ಹೇಳಿದರು.
''ನಮ್ಮ ಟ್ರೈನ್ ಇನ್ನು ಶುರುವಾಗಿಲ್ಲ. ಶುರುವಾದ ಬಳಿಕ ಹತ್ತಿಕೊಳ್ಳುವವರು ಬಂದು ಹತ್ತಿಕೊಳ್ಳುತ್ತಾರೆ. ಪ್ರಭಾಕರ್ ಕೋರೆ, ಉಮೇಶ್ ಕತ್ತಿ ಭೇಟಿಯಾಗಿದ್ದಾರೆ. ನಾವು ಹೊಸ ಗಾಡಿ ತೆಗೆದುಕೊಳ್ಳಲ್ಲ. ಹಳೆ ಗಾಡಿಯನ್ನೇ ತಯಾರಿಸಿದ್ದೇವೆ'' ಎಂದು ಕುಹಕವಾಡಿದರು.
ಇನ್ನು ರೈತ ಪ್ರತಿಭಟನೆ ಕುರಿತು ಮಾತನಾಡಿದ ಅವರು, ''ಲಕ್ಷಾಂತರ ರೈತರು ಚಳಿ ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದೆ ರಾಜ್ಯದಲ್ಲೂ ಇದೇ ಪರಿಸ್ಥಿತಿ ಉಂಟಾಗುತ್ತದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ'' ಎಂದು ಹೇಳಿದರು.